Index   ವಚನ - 333    Search  
 
ಹಲವು ಕಾಲದ ಋಷಿಯರೆಲ್ಲರೂ ಶಿವಭಕ್ತಿಯ ನೆಲೆಯನರಿತು ಬ್ರಾಹ್ಮಣರೆನಿಸಿಕೊಂಡರು. ಇವರ ನೆಲೆಯನರಿಯದ ನಿಂದಕರು ಗೆಲವಿಂಗೆ ಹೆಣಗುವ ಪರಿಯ ನೋಡಾ. ಹಲವು ದೈವಂಗಳಿಗೆರಗಿ ಕುಲದಲ್ಲಿ ಶಿಷ್ಟರೆನಿಸಿಕೊಂಬರು. ಮೊದಲೆ ಹುಟ್ಟಿದ ರುದ್ರನ ಹೆಸರ ಹೇಳಿ, ಬ್ರಾಹ್ಮಣನಲ್ಲದ ಭುಜದಲ್ಲಿ ತೊಡೆಯಲ್ಲಿ ಅಂಗದಲ್ಲಿ ಹುಟ್ಟಿದ ಶೂದ್ರ ವೈಶ್ಯ ಕ್ಷತ್ರಿಯಂಗೆ ಹೊಡೆವಡುವ ಗುರುದ್ರೋಹಿಗಳು ತಮ್ಮ ಹೆಸರು ವೇದಬ್ರಾಹ್ಮಣರೆನಿಸಿಕೊಂಡು, ಗೋವನರ್ಚಿಸಿ ಪೂಜಿಸಿ ಅನಂತ ಪರಿಯಲ್ಲಿ ಶರಣೆಂಬರು. ಮರಳಿ ಗೋಹಿಂಸೆಯ ಮಾಡುವರು. ಗೋನಾಯಿಗಳು ನುಡಿದಂತೆ ನಡೆಯರು, ನುಡಿ ಹೊಲೆ ಹಿಂಗದು. ಇಂತಿವರ ವೇದಬ್ರಾಹ್ಮಣರೆಂದವರಿಗೆ ನಾಯಕನರಕ ತಪ್ಪದೆಂದ ಕಲಿದೇವರದೇವ.