Index   ವಚನ - 3    Search  
 
ಅಲ್ಲೆನ್ನ ಅಹುದೆನ್ನ, ಎಲ್ಲವು ತನ್ನಿಂದಾಯಿತ್ತಾಗಿ. ಬೇಕೆನ್ನ ಬೇಡೆನ್ನ, ನಿತ್ಯತೃಪ್ತ ತಾನೆಯಾಗಿ. ಆಕಾರ ನಿರಾಕಾರವೆನ್ನ, ಉಭಯವನೊಳಕೊಂಡ ಗಂಭೀರ ತಾನೆಯಾಗಿ. 'ನಿಶ್ಯಬ್ದಂ ಬ್ರಹ್ಮ ಉಚ್ಯತೇ' ಎಂಬ ಶ್ರುತಿಯ ಮತದಿಂದ ನುಡಿಗೆಟ್ಟವನಲ್ಲ. ಬೆಳಗು ಬೆಳಗನೆಯ್ದಿ ಮಹಾಬೆಳಗಾದ ಬಳಿಕ, ಹೇಳಲಿಲ್ಲದ ಶಬ್ದ ಕೇಳಲಿಲ್ಲದ ಕೇಳುವೆ. ರೂಹಿಲ್ಲದ ಕೂಟ, ಕೂಟವಿಲ್ಲದ ಸುಖ. ಸುಖವಿಲ್ಲದ ಪರಿಣಾಮ, ಪರಿಣಾಮವಿಲ್ಲದ ಪರವಶ. ಪರವಶ ಪರಮಾನಂದವೆಂಬುದಕ್ಕೆ ಎರವಿಲ್ಲವಾಗಿ ಆತ ಲಿಂಗೈಕ್ಯನು. ಇಂತಪ್ಪ ಲಿಂಗೈಕ್ಯನೊಳಗೆ ಏಕವಾಗಿ ಬದುಕಿದೆನು ಕಾಣಾ, ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯ.