Index   ವಚನ - 2    Search  
 
ಅರಿವನಲ್ಲ ಮರವನಲ್ಲ ಕುರುಹಿಟ್ಟರಸುವನಲ್ಲ. ತಾನೆ ಪರಿಪೂರ್ಣನಾಗಿ ತಾನೆಂಬ ಭಾವವಳಿದು, ಇದಿರೆಂಬ ಶಂಕೆಯನರಿಯ. ಭಾವಿಸಿ ಬಳಲುವ ಭಾವದ ಭ್ರಮೆಯಳಿದು, ಭಾವವೆ ಬ್ರಹ್ಮವಾಗಿ, ಭಾವಿಸುವ ಭಾವಕನಲ್ಲ. ಆಗುಹೋಗು ಭೋಗಭೂಷಣಂಗಳ ಅನುರಾಗಮಂ ತ್ಯಜಿಸಿ, ಬಂಧ ಮೋಕ್ಷ ಸಂದುಸಂಶಯವೆಂಬ ಜಡತ್ವಮಂ ಕಳೆದು, ನಿಂದ ನಿಲವಿನ ವಶಕ್ಕೆ ವಶವಾಗದೆ, ಸಹಜ ಶಾಂತಿಸಮತೆ ನೆಲೆಗೊಂಡು ನಿಂದಾತನೆ ಶರಣ. ಇಂತಪ್ಪ ಶರಣ ನುಡಿದುದೆ ಸಿದ್ಧಾಂತ, ನೋಡಿದುದೆ ಅರ್ಪಿತ, ಮುಟ್ಟಿದುದೆ ಪ್ರಸಾದ, ಪರಿಣಾಮಿಸಿದುದೆ ತೃಪ್ತಿಯಾದಮಹಾಶರಣಂಗೆ ಶರಣೆಂದು ಬದುಕಿದೆನು ಕಾಣಾ, ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯ.