Index   ವಚನ - 43    Search  
 
ಗುರು ಶಿಷ್ಯ ಎರಡು ಒಂದಾದ ವಿನೋದವೇನೆಂಬೆ. ಶ್ರೀಗುರು ಮಹಾಂತಯೋಗೀಂದ್ರ ನೀವು ಎನಗೆ ಗತಿ ಮತಿ ಚೈತನ್ಯದಿ ಸರ್ವವು ನೀನೇ ಆದಿಯಲ್ಲಾ. ನಿನಗೆ ನಾನು ಏನಾದೆ ಹೇಳಾ? ನಾನು ನೀನೇ ಆದದ್ದು ಹೇಳಬಾರದೆಂಬುದು ಅಹಂಕಾರವೇ ದೇವಾ? ನೀನು ಅಹಂಕಾರಿಯಾಗಿರೆ ನಾನು ನಿರಹಂಕಾರಿಯಾದರೆ ಹೆಚ್ಚುಕಡಿಮೆಯಾಗುವದು. ಅದು ಕಾರಣ ನೀನು ಹೇಳದಿದ್ದರೆ ನಾನು ಹೇಳುವೆನು. ಅದೆಂತೆಂದೊಡೆ: ನಾನು ನಿನ್ನ ಗುರುವಿನಲ್ಲಿ ಮುಂದೆ ಹುಟ್ಟಿದೆ, ನೀನು ನನ್ನ ಹಿಂದೆ ಹುಟ್ಟಿದೆ: ನಿನಗೆ ನಾನು ಏನಾದೆ? ನಿನಗೆ ನಾನು ಅಣ್ಣನಾದೆ. ಮತ್ತೆ ನಾನು ಮುಂದೆ ಗುರುವ ಪಡದು ನಾ ನಿನ್ನ ಪಡೆದೆ. ನಿನಗೆ ನಾನು ತಂದಿಯಾದೆ. ನಾ ಮುಂದೆ ಗುರುವಿನ ಪಡೆದು ಆ ಗುರುವಿನಿಂದ ನಿನ್ನ ಪಡದಲ್ಲಿ ನಾ ನಿನಗೆ ಮುತ್ತ್ಯಾನಾದೆ. ಮುಂದೆ ಸಾಧುರ ಸಂಗ ಪಡೆದು ಆ ಸಾಧುರ ಸಂಗದಿಂದೆ ಗುರುವಿನ ಪಡೆದು ಆ ಗುರುವಿನಿಂದ ನಿನ್ನ ಪಡದಲ್ಲೆ ನಾ ನಿನಗೆ ಅಜ್ಜನಾದೆ. ಮುಂದೆ ಸತ್ಕರ್ಮ, ಆ ಸತ್ಕರ್ಮ ಪಡದಲ್ಲೆ ಸಾಧುರಸಂಗ, ಆ ಸಾಧುರಸಂಗದಿಂದ ಗುರು, ಆ ಗುರುವಿನಲ್ಲಿ ನೀನಾದುದಕ್ಕೆ ನಿನಗೆ ಪಣಜನಾದೆ. ಮುಂದೆ ನೀತಿ ಪಡದಲ್ಲಿ ಆ ನೀತಿಯಿಂದ ಸತ್ಕರ್ಮ, ಆ ಸತ್ಕರ್ಮದಿಂದೆ ಸಾಧುರಸಂಗ, ಆ ಸಾಧುರಸಂಗದಿಂದೆ ಗುರು, ಆ ಗುರುವಿನಿಂದ ನಾನಾದಮ್ಯಾಲೆ ನಾ ನಿನಗೆ ಪಣಜನಪ್ಪನಾದೆ. ಮುಂದೆ ನಾನು ಜ್ಞಾನ ಪಡೆದಲ್ಲಿ ಆ ಜ್ಞಾನದಿಂದ ನೀತಿ, ಆ ನೀತಿಯಿಂದೆ ಸತ್ಕರ್ಮ, ಆ ಸತ್ಕರ್ಮದಿಂದೆ ಸಾಧುರಸಂಗ, ಆ ಸಾಧುರಸಂಗದಿಂದೆ ಗುರುವು, ಆ ಗುರುವಿನಿಂದ ನಿನ್ನ ಪಡೆದಲ್ಲಿ ನಾ ನಿನಗೆ ಪಣಜನ ಮುತ್ತ್ಯನಾದೆ. ನಾ ಮುಂದೆ ನರಜನ್ಮ ಪಡದಲ್ಲಿ ಜ್ಞಾನ, ಆ ಜ್ಞಾನದಿಂದೆ ನೀತಿ, ನೀತಿಯಿಂದ ಸತ್ಕರ್ಮ, ಸತ್ಕರ್ಮದಿಂದೆ ಸಾಧುರ ಸಂಗ, ಸಾಧುರಸಂಗದಿಂದೆ ಗುರುವು, ಗುರುವಿನಿಂದೆ ನೀನು, ನಾ ನಿನಗೆ ಪಣಜನಜ್ಜನಾದೆ. ಈ ನರಜನ್ಮಕ್ಕೆ ಮುಂದೆ ಪುಣ್ಯವೆ ಕಾರಣ. ಮುಂದೆ ಪುಣ್ಯಪಡೆದಲ್ಲಿ ಆ ಪುಣ್ಯದಿಂದೆ ಈ ನರಜನ್ಮಪಡೆದೆ. ಈ ನರಜನ್ಮದಿಂದೆ ಜ್ಞಾನಪಡೆದೆ, ಈ ಜ್ಞಾನದಿಂದೆ ನೀತಿಪಡೆದೆ, ನೀತಿಯಿಂದೆ ಸತ್ಕರ್ಮ, ಸತ್ಕರ್ಮದಿಂದೆ ಸಾಧುರಸಂಗಪಡೆದೆ. ಈ ಸಾಧುರಸಂಗದಿಂದೆ ಗುರುವಿನಪಡೆದೆ. ಗುರುವಿನಿಂದ ನಿನ್ನ ಪಡೆದೆ; ನಾ ನಿನಗೆ ಪಣಜನ ಪಣಜನಾದೆ. ಇಷ್ಟಾದರೂ ಆಯಿತೇ? ಮತ್ತೆ ನಿನ್ನ ಘ್ರಾಣಕ್ಕೆ ಗಂಧವಕೊಟ್ಟೆ, ನಿನ್ನ ಜಿಹ್ವೆಗೆ ರಸವ ನೀಡಿದೆ, ನಿನ್ನ ನೇತ್ರಕ್ಕೆ ರೂಪವ ತೋರಿದೆ, ನಿನ್ನ ಅಂಗಕ್ಕೆ ಆಭರಣವನಿಟ್ಟೆ, ನಿನ್ನ ಶ್ರೋತ್ರಕ್ಕೆ ಶಬ್ದವ ಕೊಟ್ಟೆ, ನಿನ್ನ ಹೃದಯಕ್ಕೆ ತೃಪ್ತಿಯಮಾಡಿದೆ. ನಾನು ಈ ಪರಿಯಲ್ಲಿ ನಿನ್ನ ಹುಟ್ಟಿಸಿದೆ, ನಿನ್ನ ಬೆಳೆಸಿದೆ, ನಿನ್ನ ಮನ್ನಿಸಿದೆ, ನಿನ್ನ ವರ್ಣಿಸಿದೆ. ಮತ್ತೆ ಗುರು-ಶಿಷ್ಯ ಸತಿ-ಪತಿನ್ಯಾಯ. ನೀ ಪತಿ ನಾ ಸತಿ, ಅಹುದೋ ಅಲ್ಲವೋ? ಮತ್ತೆ ನೀ ಪತಿಯಾದ ಮೇಲೆ ನಿನಗೆ ನಾನು ಸೋಲಬೇಕೋ ನನಗೆ ನೀನು ಸೋಲಬೇಕೋ? ನನಗೆ ನೀ ಸೋತಲ್ಲಿ ನಾ ಹೆಚ್ಚೊ? ನೀ ಹೆಚ್ಚೊ? ನಾನೇ ಹೆಚ್ಚು. ಅದು ಹೇಗೆಂದಡೆ: ನನ್ನ ಮುಡಿಯಲಾದ ಗಂಧಕ್ಕೆ ನಿನ್ನ ಘ್ರಾಣೇಂದ್ರಿಯ ಸೋತಿತು. ನನ್ನ ಅಧರಾಮೃತಕ್ಕೆ ನಿನ್ನ ಜಿಹ್ವೇಂದ್ರಿಯ ಸೋತಿತು. ನನ್ನ ಹಾವ ಭಾವ ವಿಭ್ರಮ ವಿಲಾಸ ಶೃಂಗಾರ ತೋರಿಕೆಗೆ ನಿನ್ನ ನಯನೇಂದ್ರಿಯ ಸೋತಿತು. ನನ್ನ ಅಂಗದಾಲಿಂಗಕ್ಕೆ ನಿನ್ನ ತ್ವಗೇಂದ್ರಿಯ ಸೋತಿತು. ನನ್ನ ಸಂಗಸಮರಸದಲ್ಲಿ ನಿನ್ನ ಸಂಯೋಗ ಸೋತಿತು. ನೀನು ಆವ ಪರಿಯಾಗಿ ನನ್ನ ಸೋಲಿಸಬಂದರೆ. ನಾನು ನಿನ್ನ ಆವಾವ ಪರಿಯಾಗಿ ಸೋಲಿಸಿದೆ. ಅದು ಹಾಂಗಿರಲಿ, ಇನ್ನೊಂದುಂಟು-ಅದು ಏನೆನಲು: ನೀನು ನಾ ಮುಡದದ್ದು ಮುಡದಿ, ನಾ ಉಂಡದ್ದು ಉಂಡಿ, ನಾ ಕಂಡದ್ದು ಕಂಡಿ, ನಾ ಉಟ್ಟದ್ದು ಉಟ್ಟಿ, ನಾ ಕೇಳಿದ್ದು ಕೇಳಿದಿ, ನಾ ಕುಡದದ್ದು ಕುಡಿದಿ, ನೀನು ನನ್ನ ಪ್ರಸಾದಿ ಆದಿಯಲ್ಲಾ. ಮತ್ತೆ ನನ್ನ ಮೂಗೇ ನಿನ್ನ ಮೂಗು, ನನ್ನ ಬಾಯಿಯೇ ನಿನ್ನ ಬಾಯಿ, ನನ್ನ ಕಣ್ಣೇ ನಿನ್ನ ಕಣ್ಣು, ನನ್ನ ಮೈಯ್ಯೇ ನಿನ್ನ ಮೈ, ನನ್ನ ಕಿವಿಯೇ ನಿನ್ನ ಕಿವಿ, ನನ್ನ ಹೃದಯವೇ ನಿನ್ನ ಹೃದಯ, ನನ್ನ ಪ್ರಾಣವೇ ನಿನ್ನ ಪ್ರಾಣ, ನನ್ನ ಮನವೇ ನಿನ್ನ ಮನ, ನಾನೇ ನೀನು, ನನ್ನ ಬಿಟ್ಟರೆ ನಿನಗೆ ಗತಿಯಿಲ್ಲ. ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.