Index   ವಚನ - 50    Search  
 
ಸುಳ್ಳು ಸುಳ್ಳು ನಿರ್ಬಯಲ ನಿರುಪಮ ನಿರಾವರಣ ನಿರ್ಮಾಯ ನಿರ್ಲಯ ನಿಷ್ಕಲ-ಇವು ಆರು ಸುಳ್ಳೆನಿಸಿತ್ತು. ನಿರ್ಭಾವ ನಿರ್ಜೀವ ನಿರ್ದೇಹ ನಿರ್ಜ್ಯಾತ ನಿರಂಜನ ನಿರಾಲಂಬ-ಇವು ಆರು ಸತ್ತೆನಿಸಿತ್ತು. ಸುರಾಳ ನಿರಾಳ ಅಣು ರೇಣು ಮಹಾ ಮಹತ್ವ ಇವು ಆರು ಚಿತ್ತೆನಿಸಿತ್ತು. ನಿಷ್ಕಾಮ ನಿರ್ಮೋಹ ನಿರ್ಲೋಭ ನಿರ್ಮದ ನಿರ್ಲೇಪ ನಿಶ್ಚಿಂತ-ಇವು ಆರು ಆನಂದವೆನಿಸಿತ್ತು. ನಿರಾಶ ನಿರ್ಗುಣ ನಿಷ್ಕರ್ಮ ನಿರ್ಭಯ ನಿರ್ಲಜ್ಜ ನಿಃಶಬ್ದ-ಇವು ಆರು ನಿತ್ಯವೆನಿಸಿತ್ತು. ಚಿನ್ನಾದ ಚಿದ್ಬಿಂದು ಚಿತ್ಕಳೆ ಚಿದ್ರೂಪ ಚಿನ್ಮಯ ಚಿತ್ಪ್ರಕಾಶ-ಇವು ಆರು ಪರಿಪೂರ್ಣವೆನಿಸಿತ್ತು. ಪರವಸ್ತು ಘನವಸ್ತು ನಿಜವಸ್ತು ಮಹಾಂತ ಸ್ವಯಂಭು ಅಖಂಡ-ಇವು ಆರು ಅವಿರಳಪರಂಜ್ಯೋತಿಯೆನಿಸಿತ್ತು. ಈ ಆರಾರು ಮೂವತ್ತಾರು ಮಹಾತತ್ವಯುಕ್ತವಾಗಿ ತಾನೆ ತಾನಾದ ಅವಿರಳಪರಂಜ್ಯೋತಿಯೆನಿಸಿದ ಪರಬ್ರಹ್ಮವೆಂಬ ಮಹಾಬಯಲೊಳಗೆ ತೋರಿಯಡಗಿದ ಸ್ಥೂಲ ಸೂಕ್ಷ್ಮ ಕಾರಣ ಮಹಾಕಾರಣ ಶೂನ್ಯ ನಿಶ್ಶೂನ್ಯ-ಇವು ಆರರ ವಿವರ: ನಾದ ಬಿಂದು ಕಳೆ-ಒಂದೇ ಮೂರು, ಮೂರು ಒಂದೆ. ಇವು ಮೂರು ಒಂದಾದ ಒಡಲಿಂಗೆ ಶಿವ ಜಗ ಗುರು ಶಿಷ್ಯ ಮಹಾಂತ ಮುಕ್ತಿ-ಇವು ಆರು. ಈ ಆರು ಮುಖದಿಂದೊಪ್ಪುವ ಚಿದ್ಬೈಲಮೂರ್ತಿಯು ತಾನೆ ಶಿವ-ಶಕ್ತಿ, ಅಂಗ-ಲಿಂಗ, ನಾನು-ನೀನು ಎಂಬ ತನ್ನ ತಾನೇ ಒಂದೇ ಎರಡಾದ, ಎರಡು ಒಂದಾದ ವಿನೋದವೇನೆಂಬೆ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.