Index   ವಚನ - 49    Search  
 
ನಿರ್ಬಯಲು ನಿರ್ಬಯಲು ನಿರ್ಬಯಲೆ ಮಹಾಬಯಲು ನಿರ್ಬಯಲೆ ಚಿದ್ಬಯಲಲೆ ಮಹಾಂತಯೋಗಿ. | ಪಲ್ಲ | ಚಿತ್ಕಳೆಯು ಚಿತ್ಕಳೆಯು ಚಿತ್ಕಳೆಯು ಚಿದ್ಬಿಂದು ಚಿತ್ಕಳೆಯು ಚಿನ್ನಾದ ತಾನೆ ತಾನೆ. ಚಿತ್ಕಳೆಯು ಕಳೆಯೊಳಗೆ ಚಿತ್ಕಳೆಯು ಬಿಂದುದಿಸಿ ಚಿತ್ಕಳೆಯ ನಾದವು ತಾನೆ ಮಹಾಂತಯೋಗಿ. | 1| ನಾದ ಬಿಂದು ಕಳೆಯು ಆದ ಮೂರೂ ಕೂಡಿ ಭೇದವಿಲ್ಲದೆ ತಾನೊಂದಾಯಿತಲ್ಲಾ! ಆಧಾರವೆರಡಾದ ಮಹತ್ವ ಅದರೋಳೊಂದು ಬೋಧರೂಪಾಗಿರ್ದ ಮಹಾಂತಯೋಗಿ. | 2| ಮೂರು ಮೂರೆರಡಾಗಿ ಮೂರು ತಾ ಬ್ಯಾರ್ಯಾಗಿ ಆರು ಮೂರಕ್ಕೆ ಮೇಲಾಯಿತಲ್ಲಾ! ಆರಾರಿನ್ನೂರ್ಹದಿ- ನಾರಾದ ತತ್ವ ಮಹಾ ಕಾರಣನೆ ಪರಬ್ರಹ್ಮ ಮಹಾಂತಯೋಗಿ. | 3| ಆ ಮಹಾಕಾರಣದೊಳಗೆ ತಾ ಮಹಾನಿರ್ಬಯಲಿರಲು ಮಹಾ ಅಖಂಡ ರೂಪಾಯಿತಲ್ಲಾ! ಈ ಮಹಾಲಿಂಗದ ಚಿ ತ್ಪ್ರೇಮವೇ ಶ್ರೀಮಹಾದೇವಿ ಕಾಮಿತ ಕಲ್ಪವೃಕ್ಷ ಮಹಾಂತಯೋಗಿ. | 4| ತಾನೆ ತಾನೆರಡಾಗಿ ತಾನೆರಡೊಂದಾಗಿ ತಾನೆ ಮುಂದೊಂದು ರೂಪಾಯಿತಲ್ಲಾ! ತಾನೆ ಮುಂದೊಂದಾದ ತಾನೆ ಆ ವಸ್ತುವಿಗೆ ತಾನಾರುಮುಖವಾದ ಮಹಾಂತಯೋಗಿ. | 5| ಆರು ಮುಖಗಳು ತಾನೆ ಆರು ಆಕೃತಿಯಾಗಿ ಆರು ಕಲೆ ಆರು ಲಿಂಗಾಯಿತಲ್ಲಾ! ಆರು ಲಿಂಗಾಂಗಕ್ಕೆ ಆರು ಶಕ್ತಿಗಳಾಗಿ ಆರಾರೊಂದಾಗಿರ್ದ ಮಹಾಂತಯೋಗಿ. | 6| ಆರು ಅಧಿದೇವತರಿಂ ಆರು ಭೂತಗಳು ಹುಟ್ಟಿ ಮೂರು ಲೋಕವೆಂಬುದೊಂದಾಯಿತಲ್ಲಾ! ಮೂರು ಲೋಕದೊಳಗೆ ಈರೇಳು ಲೋಕಾಗಿ ಮೇರು ಅವರ್ಕಾದ ಮಹಾಂತಯೋಗಿ. | 7| ಆವರಣದಾವರಣ ಈವರಣೆಂದ್ಹೇಳಕಾ ಲಾವರಣದೊಳಗೈವತ್ತಾಯಿತಲ್ಲಾ! ಆವರಣ ಈವರಣ ಭಾವರಣ ಬಹುವರಣ ಜೀವರಣ ತಾನಾದ ಮಹಾಂತಯೋಗಿ. | 8| ಜೀವೇ ತಾ ಬ್ರಹ್ಮಾಂಡ ಜೀವೇ ತಾ ಪಿಂಡಾಂಡ ಜೀವೇ ತಾ ಸಚರಾಚರವಾಯಿತಲ್ಲಾ! ಜೀವೇ ದೇವರ ದೇವ ಜೀವೇ ಸಾವರ ಸಾವ ಜೀವಕ್ಕೆ ಜೀವಾದ ಮಹಾಂತಯೋಗಿ. | 9| ಜೀವಾತ್ಮ ಜೀವಾತ್ಮ ಜೀವಾತ್ಮ ಅಂತರಾತ್ಮ ಜೀವಾತ್ಮ ಪರಮಾತ್ಮವಾಯಿತಲ್ಲಾ! ಜೀವಾತ್ಮ ಮಹಾತ್ಮ ಜೀವಾತ್ಮ ಬಹುವಾತ್ಮ ಜೀವಾತ್ಮ ಏಕಾತ್ಮ ಮಹಾಂತಯೋಗಿ. | 10| ಕನ್ನೆಸುರಳಿಸಲೊಂದು ಸೊನ್ನೆ ಮಂಡಲವಾಗಿ ಸೊನ್ನೆ ಹನ್ನೊಂದು ರೂಪಾಯಿತಲ್ಲಾ! ಹನ್ನೊಂದು ಹಲವಾಗಿ ಇನ್ನೊಂದಿಲ್ಲಲ್ಲೆನಿಸಿ ಕನ್ನೆ ಕಾರಣವಾದ ಮಹಾಂತಯೋಗಿ. | 11| ಗೌರ ಗಂಭೀರ ಸುಧೆ ಮೀರಿ ಬಗೆ ಬಗೆ ಸ್ವಾದ ಹಾರೈಸಿ ಹಲವು ಬೀಜಾಯಿತಲ್ಲಾ! ತಾರ ಅಷ್ಟತನುವು ಕೂಡಿ ಸಾರ ಸಂಗ್ರಹ ಮಾಡಿ ತೋರಿದಾ ಷಡ್ರಸವೊ ಮಹಾಂತಯೋಗಿ. | 12| ಮಾಡಿಕೊಂಡುಣದಿರಲು ಬೇಡಿಕೊಂಡುಣಬೇಕು ಮಾಡಿ ಬೇಡುಂಬುದೆರಡಾಯಿತಲ್ಲಾ! ನಾಡಕೃತ್ಯವ ನೋಡಿ ಜೋಡು ಸೂತ್ರವ ಹೂಡಿ ನಾಡ ನಾಡ ಹಡದಾತ ಮಹಾಂತಯೋಗಿ. | 13| ಹಾಡೋದು ಆಡೋದು ನೋಡೋದು ಓಡೋದು ಕೂಡ್ರೋದು ಕಾಡೋದು ಒಂದಾಯಿತಲ್ಲಾ! ಕಾಡು ಕತ್ತಲೆಯಾಗಿ ಮೋಡ ಮರೆಗೊಂಡಿರಲು ಜೋಡ ಅಗಲಿದಂತಾದ ಮಹಾಂತಯೋಗಿ. | 14| ಮರವೆ ಅರವಿನೊಳಗಾಗಿ ಅರವು ಮರವಿನೊಳಾಗಿ ಅರವು ಮರವೆಂಬುವೆರಡಾಯಿತಲ್ಲಾ! ಅರುವು ಮರವೆರಡರೊಳು ನರ ನಾಗ ಸುರ ಅಸುರ ಪರಿಪರಿ ಮನುಮುನಿಯಾದ ಮಹಾಂತಯೋಗಿ. | 15| ಇಂತು ರೂಪಾಗಿರ್ದ- ನಂತ ಕಾಲವು ಕಳಿಯೇ ಎಂತಿರ್ದಂತಿರ್ದಂತಾಯಿತಯ್ಯಾ! ಕಂತುಕೇಳಿಯೊಳಿರಲು ಅಂತಕಾಂತಕನಾಗಿ ಚಿಂತೆ ಚಿಂತಿಸಲಾದ ಮಹಾಂತಯೋಗಿ. | 16| ಚಿಂತೆ ಘನವಾಗಲಿಕ್ಕೆ ಎಂತಯ್ಯಯೆನಲು ತಾ ನಂತರಂತರವಾಗಿ ಹೋಯಿತಲ್ಲಾ! ಪಂಥ ಪಕ್ಷವು ಮೀರೆ ಕಂತು ಹೇಯವು ತೋರೆ ಚಿಂತೆ ಚಿಂತಾರತ್ ಮಹಾಂತಯೋಗಿ. | 17| ಬಿಂದು ರೂಪಾಗಿ ನಾ ಬಂದೆ ಯೋನಿಯೊಳಿಂದು ಸಂದೇಹದೊಳಗೆ ಬೆರಗಾಯಿತಲ್ಲಾ! ಅಂದವಳಿದಿರ್ದಲ್ಲಿ ಮುಂದೆ ಸುಜ್ಞಾನವಾಯಿತು ಬಂದ ಶ್ರೀಗುರುರಾಯ ಮಹಾಂತಯೋಗಿ. | 18| ಹಲವು ಗುರುಮುಖದಿಂದೆ ಹಲವು ಮಂತ್ರವ ಕೇಳಿ ಹಲವು ಯೋಗ ಸಾಧನವಾಯಿತಲ್ಲಾ! ಹಲವು ಮತದೊಳಗ್ಹೊಕ್ಕು ಹಲವು ಸಿದ್ಧಿಯ ಪಡೆದು ಹಲವು ಮಹತ್ವ ಆದಾತ ಮಹಾಂತಯೋಗಿ. | 19| ಹಲವು ಮಹತ್ವದಲ್ಲಿ ಹಲವು ಪೂಜೆಯಗೊಂಡು ಹಲವರಿಗೆ ಪೂಜಿಸುವದಾಯಿತಲ್ಲಾ! ಹಲವು ಮತದೊಳಗೊಂದು ಸುಲಭ ಶಿವಮತವಿರಲು ಚಲುವ ಅಷ್ಟಾವರಣದ ಮಹಾಂತಯೋಗಿ. | 20| ಶಿವನ ಅಷ್ಟಾವರಣವೇ ಶಿವಪದವಿಯೆನಿಸಿತ್ತು ಶಿವಶರಣೆಂಬುವದೆರಡಾಯಿತಲ್ಲಾ! ಶಿವಪದವಿಯೆಂಬುವದು ಭವದ ಮಲಕಿನ ಕೀಲು ಶಿವನ ನಿಜತತ್ವ ಆದ ಮಹಾಂತಯೋಗಿ. | 21| ನಿಜತತ್ವಯೆಂಬುವದು ಅಜಹರಿಗೆ ಅಳವಡದು ಈ ಜನರ ಗಜವಿಜಿಗೆ ಬೆರಗಾಯಿತಲ್ಲಾ! ಮಜರೆ ಮಹಾಜ್ಞಾನಕ್ಕೆ ತ್ರಿಜಗ ತನ್ನೊಳಗಾಗಿ ನಿಜಶರಣ ತಾನಾದ ಮಹಾಂತಯೋಗಿ. | 22| ಶರಣನಾಚರಣೆಯು ಮೆರೆಯುವ ಮಹಾನುಭಾವ ಅರಿದು ಹೇಳುವದು ಕೇಳುವದು ಆಯಿತಲ್ಲಾ! ಪರಿಪರಿಯ ನುಡಿಗಳು ಪರಿಪರಿಯ ನಡೆಗಳು ನಿರಹಂಕಾರದೊಳಿರ್ದ ಮಹಾಂತಯೋಗಿ. | 23| ನಿರಹಂಕಾರದಲ್ಲಿ ಅರವು ವಿಕಸನವಾಯಿತು ಅರುವಿಗೆ ಅರುವು ಮೇಲಾಯಿತಲ್ಲಾ! ಅರವು ಅಡಗಿದ ಬಳಿಕ ಕುರುಹು ಕಾಣದೇ ಹೋಯಿತು ಉರಿಯುಂಡ ಕರ್ಪುರವೋ ಮಹಾಂತಯೋಗಿ. | 24| ಬಯಲ ನೆನವಿನೊಳಾದ ಬಯಲುಬ್ರಹ್ಮಾಂಡದೊಳು ಬಯಲೇ ಪಿಂಡಾಂಡಮಯವಾಯಿತಲ್ಲಾ! ಬಯಲಬ್ರಹ್ಮವ ಬೀರಿ ಬಯಲ ಮಡಿವಾಳ ಸಾರಿ ಬಯಲೇ ನಿರ್ಬಯಲಾದ ಮಹಾಂತಯೋಗಿ. | 25|