ಆ ಪರಶಿವನ ಮಾಯಾಸ್ವರೂಪವಾದ ಈ ಲೋಕದ ಜನರಿಗೆ
ಪೂರ್ವಪುಣ್ಯವೊದಗಿ, ಸಂಸಾರ ಹೇಯವಾಗಿ,
ಗುರುಕಾರುಣ್ಯವ ಪಡೆದು, ಆತ್ಮಜ್ಞಾನ ತಿಳಿಯಲಿಕ್ಕೆ,
ಮನಗೊಟ್ಟು, ತತ್ವವ ಶೋಧಿಸಿ,
ಪುರಾತನ ವಚನ ಹಾಡಿಕೊಂಡು
ಅನುಭವಿಯಾಗಿ, ನಾನೇ ಅನುಭಾವಿ ನಾನೇ ಪ್ರಭು,
ನಾನೇ ಪರಬ್ರಹ್ಮವ ಬಲ್ಲ ಪರಮಜ್ಞಾನಿಯೆಂದು,
ಬಸವಾದಿ ಪೂರ್ವಪ್ರಮಥರ ಪುರಾತರ ಮಹಾಗಣಂಗಳ ಜರಿದು,
ಈ ಭುವನದಲ್ಲಿ ಇನ್ನ್ಯಾಯರು ನಿಜವನರಿತವರಿಲ್ಲೆಂದು ಅಹಂಕರಿಸಿ,
ನಾವು ಮಹಾಜ್ಞಾನಿಗಳು, ನಾವು ಕೇವಲ ಶಿವಾಂಶಿಕರು,
ನಮ್ಮನ್ನಾರು ಅರಿಯರು,
ನಮ್ಮ ಬಲ್ಲವರು ಪುಣ್ಯವಂತರು,
ನಮ್ಮನ್ನರಿಯದವರು ಪಾಪಿಷ್ಠರು.
ನಾವು ಮಹತ್ವ ಉಳ್ಳವರು, ನಾವು ಮಕ್ಕಳ ಕೊಡುವೆವು,
ರೋಗ ಕಳೆಯುವೆವು, ಬ್ರಹ್ಮಹತ್ಯಾದಿ
ಪಿಶಾಚಿಯ ಸೋಂಕು ಬಿಡಿಸುವೆವು
ಎಂದು ವಿಭೂತಿ ಮಂತ್ರಿಸಿಕೊಟ್ಟು,
ಅವರ ಮನೆಯಲ್ಲಿ ಶಿವಪೂಜೆಯ ಪಸಾರವನಿಳಿಯಿಟ್ಟು,
ಆ ರೋಗದವರನ್ನು ಮುಂದೆ ಕೂಡ್ರಿಸಿಕೊಂಡು,
ತಾ ಕೂತು ಕಣ್ಣು ಮುಚ್ಚಿ, ಒಳಗೆ ಬೆಳಗವ ಕಂಡು,
ಕಣ್ದೆರೆದು, ಬಿರಿಗಣ್ಣಿನಿಂದ ನೋಡ್ತ ಹಡ್ತ ಹುಡ್ತ ಮಾಡಿ
ಪರಿಣಾಮವಾಗಲೆಂದು ಹೇಳಲು, ಅದು ರಿಣಾ ತೀರಿಹೋದರೆ,
ನಮ್ಮ ಮಹತ್ವ ಎಂಥಾದ್ದು,
ಹಿಂದೆ ಇಂಥಾ ಮಹತ್ವ ಬಳಹ ಮಾಡೀವಿಯೆಂದು
ಅಲ್ಲಲ್ಲಿ ಹೆಸರು ಹೇಳಿಕೊಳ್ಳಬೇಕು. ಅದು ಹೋಗದಿದ್ದರೆ-
ಇವರ ವಿಶ್ವಾಸ ಘಟ್ಟಿಲ್ಲೆಂದು, ಏನರೆ ನೆವ ಕೊಳ್ಳಬೇಕು.
ಕೊಟ್ಟರೆ ಹೊಗಳಬೇಕು, ಕೊಡದಿದ್ದರೆ ಬೊಗಳಬೇಕು.
ಅವರಿಂದ ಆ ಹಣವು ತನಗೆ ಬಾರದಿದ್ದರೆ
ಅವರ ಅರ್ಥವ ಕಳೆಯಬೇಕೆಂಬ ಯೋಚನೆಬೇಕು.
ಅಥವಾ ಫಣ್ಯಾಚಾರದಲ್ಲಿ ಅವರಿಂದ ಅರ್ಥವ ಸೆಳೆತಂದು
ಹಿಂದೆ ತಾ ಬಿಟ್ಟು ಪೂರ್ವಪ್ರಪಂಚದವರಿಗೆ ಕೊಟ್ಟು
ಈ ವಿಷಯಾತುರಕ್ಕೆ ವಾಯು ತಪ್ಪಿ ನಡೆದು
ಇದು ಪ್ರಭುವಿನಪ್ಪಣೆಯೆಂದು ಹಾಡಿದ್ದೇ ಹಾಡುವ
ಕಿಸಬಾಯಿದಾಸನ್ಹಾಂಗೆ ಹಾಡಿದ್ದೇ ಹಾಡಿಕೊಳ್ಳುತ್ತ,
ಕ್ರೀಯ ನಿಃಕ್ರಿಯವಾಗಿ ಸತ್ತ ಕತ್ತಿಯ ಎಲವು ತಂದು
ತಿಪ್ಪಿಯಲ್ಲಿ ಬಚ್ಚಿಟ್ಟು ಸುತ್ತುವ ತಲೆಹುಳುಕ
ಹುಚ್ಚುನಾಯಿಯಂತೆ, ಉಚ್ಚಿಯಾ ಪುಚ್ಚಿಗೆ ಮೆಚ್ಚನಿಟ್ಟ
ನಿಚ್ಚ ಕಚ್ಚಿಗಡಕರಿಗೆ ತಮ್ಮ ನಿಜದೆಚ್ಚರ ಇನ್ನೆಲ್ಲಿಹದೋ?
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.