Index   ವಚನ - 62    Search  
 
ಆ ಪರಶಿವನ ಮೂಲಮಂತ್ರಸ್ವರೂಪವಾದ ಭುವನಬ್ರಹ್ಮಾಂಡದ, ಸಕಲಜೀವಿಗಳ ವಿಸ್ತಾರವ ಕಂಡು, ತೋರಿ ಅಡಗುವ ಪರಿಗೆ ಸಂಸಾರಮಿಥ್ಯವೆಂದು ಸಜ್ಜನಗುಣದಲ್ಲಿ ಕೂಡಿ, ಸತ್ಪುರುಷರ ಸಂಗವಮಾಡಿ, ಶಾಸ್ತ್ರಾಗಮ ಶಿವಪುರಾಣ, ಶಿವಾಚಾರದಲ್ಲಿ ಮನವಿಟ್ಟು ತತ್ ತ್ವಂ ಅಸಿಯೆಂಬೋ ವಾಕ್ಯಕ್ಕೆ ಚಿತ್ತವೆಳಸಿ ವಸ್ತು ತಿಳಿಯಬೇಕೆಂದು ತತ್ವಜ್ಞಾನಿಗಳ ಹುಡುಕುವ ಶ್ರುತಿಜ್ಞಾನಿಗಳಿಗೆ, ಆ ವಸ್ತುವೇ ಗುರುವಾಗಿ, ತತ್ವೋಪದೇಶವ ಹೇಳಿ, ತತ್ವ ಮಂತ್ರ ವಿವರವ ತಿಳಿಸಲು, ಆ ತತ್ವ ಮಂತ್ರ ವಿವರವ ತನ್ನೊಳಗೆ ಲಕ್ಷವಿಟ್ಟು ನೋಡೆ ಆತ್ಮಜ್ಞಾನ ಅನುಮಿಷವಾಯಿತ್ತು. ಆ ಆತ್ಮಜ್ಞಾನ ಅನುಮಿಷದೃಷ್ಟಿ, ಆ ಆತ್ಮಾನಾತ್ಮವ ಶೋಧಿಸಿತ್ತು. ಆ ಶೋಧನೆ ಮಹಾಜ್ಞಾನ ಬೆಳಗಲು, ಆ ಬೆಳಗಿನೊಳಗೆ ಮೂಲಪ್ರಣವದ ಒಡಲೊಳಗಿನ ಆರು ಆಕೃತಿಗಳೆ ಆರು ಬೀಜಪ್ರಣವಗಳು, ಆ ಆರು ಪ್ರಣವಗಳೇ ಆ ಪರಶಿವನ ಆರು ಮುಖಗಳು, ಆ ಆರು ಮುಖಗಳಿಗೆ ಆರು ತತ್ವಗಳು, ಆರಾರು ಮೂವತ್ತಾರುತತ್ವವು. ಮೂವತ್ತಾರುತತ್ವಗಳಿಗೆ ಬ್ರಹ್ಮಾಂಡ, ಆ ಬ್ರಹ್ಮಾಂಡವೇ ಹನ್ನೆರಡು ಭೂತ, ಹನ್ನೆರಡು ಭೂತಗಳೇ ಪಿಂಡಾಂಡ. ಆ ಪಿಂಡಾಂಡದಲ್ಲಿ ಹನ್ನೆರಡು ಜ್ಞಾನ, ಹನ್ನೆರಡು ಸ್ಥಾನ, ಹನ್ನೆರಡು ಚಕ್ರ, ಹನ್ನೆರಡು ಅಂಗ, ಹನ್ನೆರಡು ಲಿಂಗ, ಹನ್ನೆರಡು ಭಕ್ತಿ, ಹನ್ನೆರಡು ಶಕ್ತಿ, ಹನ್ನೆರಡು ಮಂತ್ರ, ಹನ್ನೆರಡು ಹಸ್ತ, ಹನ್ನೆರಡು ಮುಖ, ಹನ್ನೆರಡು ಪದಾರ್ಥ, ಹನ್ನೆರಡು ಪ್ರಸಾದ, ಹನ್ನೆರಡು ತೃಪ್ತಿ-ಇವು ಮೊದಲಾದ ಸತ್ಕರ್ಮದೊಳಾಗದ ಸರ್ವಸುಗುಣಗಳು, ಸರ್ವದುರ್ಗುಣಗಳು, ಸರ್ವವೂ ಮೂಲಪ್ರಣವವೆಂದು ತಿಳಿದು, ಸರ್ವವೂ ಮೂಲಪ್ರಣವವೇ ಶಿವ, ಆ ಮೂಲಪ್ರಣವವೇ ಅಷ್ಟಾವರಣ, ಆ ಮೂಲಪ್ರಣವವೇ ಸಕಲಪ್ರಾಣಿಗಳು, ಆ ಮೂಲಪ್ರಣವವೇ ನಾನು, ಸರ್ವವೂ ಮೂಲಪ್ರಣವವೆಂದು ಇಲ್ಲೇನು, ಅಲ್ಲೇನು, ಎಲ್ಲೇನು, ಹಿಂಗೇನು, ಹಾಂಗೇನು, ಹ್ಯಾಂಗೇನು, ಇದ್ದಂಗಿರು ಸಿದ್ಧೇಶನೆಂಬುವದ ತಿಳಿದು, ತಿಳಿಯದೇ ನರಕದ ಕೇರಿಗೆ ಕಿರಿಕುಲದ ಸೂಕರ ಹೋದಂತೆ, ಹಸಿಯ ತೊಗಲಿನ ವಸರುವ ತೂತಿನ ಹಳೇ ಘಾಯಿಯ ಬಿರಿಕಿನೊಳಗೆ, ಸರಕನೇ ಎದ್ದು ಜರಕನೇ ಜಾರಿ ಸಿಗಬಿದ್ದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.