Index   ವಚನ - 66    Search  
 
ಆ ಪರಶಿವ ತಾನೇ ತಾನಾದ, ಲೀಲಾವೇಷದಲ್ಲಿ ಮೇಲಾದ. ತಾನೇ ಶಿವ, ನಾನೇ ಶಿಷ್ಯ, ನೀನೇ ಗುರುವು, ಏನು ಮುಕ್ತಿ? ಈ ಚಾಪಲ್ಯದೊಳಗೆ ನೀ ಹೇಳಿದ್ಹಾಂಗೆ ನಾ ಕೇಳಿದೆನಾಗಿ ಒಂದೇ ಒಂದೆಂಬೋ ನಿಜಜ್ಞಾನ ಸಾಧಿಸುತ್ತ, ಆ ನಿಜಜ್ಞಾನದಿಂದೆ ನೋಡಲು, ಆವರ್ತದಿ ಬೀಜಮಧ್ಯ ಸಾವು ಅಂತ್ಯವಾಗಿ, ಸರ್ವವು ಸರ್ವಮಯವೆನಿಸಿತ್ತು. ಮತ್ತೆ ಕಾಮ ಮನ್ಮಥನಲ್ಲಿ, ಕ್ರೋಧ ಯಮನಲ್ಲಿ, ಲೋಭ ಕುಬೇರನಲ್ಲಿ, ಮೋಹ ಇಂದ್ರನಲ್ಲಿ, ಮದ ಬ್ರಹ್ಮನಲ್ಲಿ, ಮತ್ಸರ ವರುಣನಲ್ಲಿ. ಮತ್ತೆ ಭಕ್ತಿ ಬಸವಣ್ಣನಲ್ಲಿ, ವೈರಾಗ್ಯ ಮಡಿವಾಳನಲ್ಲಿ, ಶಾಂತಿ ಮರುಳಶಂಕರದೇವರಲ್ಲಿ, ನಿಜ ಅಜಗಣ್ಣನಲ್ಲಿ, ಜ್ಞಾನ ಚೆನ್ನಬಸವಣ್ಣನಲ್ಲಿ; ಅರುಹು ಪ್ರಭುವಿನಲ್ಲಿ, ಕುರುಹು ಗೊಲ್ಲಾಳನಲ್ಲಿ. ಮತ್ತೆ ಸುಖ ಸ್ವರ್ಗದಲ್ಲಿ, ದುಃಖ ನರಕದಲ್ಲಿ, ಪುಣ್ಯ ಸತ್ಕರ್ಮದಲ್ಲಿ, ಪಾಪ ದುಷ್ಕರ್ಮದಲ್ಲಿ, ಜೀವಾತ್ಮ ಪರಮಾತ್ಮನಲ್ಲಿ, ಪರಮಾತ್ಮ ಮೊದಲಲ್ಲೆ.ಮತ್ತೆ ಹಲವು ಮಲದಲ್ಲಿ ನಾ ಶಿಷ್ಯನಲ್ಲೇ, ನೀ ಗುರುವಿನಲ್ಲೇ, ತಾ ಶಿವನಲ್ಲೇ, ಮುಕ್ತಿಯಲ್ಲೇ, ಅಲ್ಲೇನೋ, ಇಲ್ಲೇನೋ ಎಲ್ಲೇನೋ ಎಂತೇನೋ? ನಾನೇನೋ ನೀನೇನೋ, ತಾನೇನೋ ಏನೇನೋ? ಇದೇ ನಿಜವೆಂಬ ಅರುವು ಅಡಗಿದುದು ಬೆರಗು. ಈ ಬೆರಗು ಹೋದುದೇ ನಿಬ್ಬೆರಗು. ನಿಬ್ಬೆರಗು ಎಂಬುದೇ ಬಯಲು; ಆ ಬಯಲು ಬಯಲಾದದ್ದೇ ನಿರ್ಬಯಲು-ಇದಲ್ಲದೆ ನಿಜವು ತಿಳಿದಿದ್ದು; ಆ ನಿಜವು ತಾನಾಗದಿರ್ದರೆ ಆ ಮನುಜರು ಮುಂದೇನಾದರು? ಗಜವಿಜಿಗೆ ಹೋತ್ಹೋಯಿತು, ಚದುರರಾದವರೆಲ್ಲಾ ಬದಿರಾಗಿ ಹೋದರು. ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.