Index   ವಚನ - 75    Search  
 
ಸತ್ಯವೇ ಗುರುವಾಗಿ ತೋರಿತು, ಚಿತ್ತವೆ ಲಿಂಗವಾಗಿ ತೋರಿತು, ಆನಂದವೆ ಜಂಗಮವಾಗಿ ತೋರಿತು, ನಿತ್ಯವೆ ಪಾದೋದಕವಾಗಿ ತೋರಿತು, ಪರಿಪೂರ್ಣವೆ ಪ್ರಸಾದವಾಗಿ ತೋರಿತು, ಅಖಂಡತ್ವವೇ ಶಿವಾಕ್ಷಮಣಿ ಎನಿಸಿ ತೋರಿತು. ಆ ಪರಬ್ರಹ್ಮವೇ ತಾನಾದ ವಿನೋದವು ಮಂತ್ರವೆನಿಸಿತ್ತು. ಮತ್ತೆ ತನ್ನ ನಾಮವೆ ಪಂಚಾಕ್ಷರಿ, ತನ್ನ ಸ್ಥಲವೇ ಷಡಕ್ಷರಿ, ತನ್ನ ರೂಪ ದೇಹ ನೋಟ ನೆನಹು ಸರ್ವವೂ ಪರಶಿವರೂಪ. ಆನಿ ಬೆಳವಲಹಣ್ಣು ನುಂಗಿದಾ ಪರಿಯಂತೆ, ಒಡೆದರೆ ಏನೂ ಇಲ್ಲ ಬೈಲೇ ಬೈಲು, ಅದರಂತೆ ಕೇಳೋದು ಬೈಲು, ಹೇಳೋದು, ಬೈಲು, ಹೌದು ಎಂಬುವದದು ಬೈಲು, ಅಲ್ಲವೆಂಬುದದು ಬೈಲು; ಬೈಲಿಗೆ ಬೈಲು ನಿರ್ಬೈಲು. ಕಾಡಕಿಚ್ಚಿನ ಕೈಯ ಮೆದಿಯ ಕೊಯಿಸಿದರೆ ಹಿಂದೆ ಮೆದಿ ಇಲ್ಲಾ, ಮುಂದೆ ನಿಲುವು ಇಲ್ಲಾ. ವಾಯದ ರಾಸಿಗೆ ಮರಣದ ಕೊಳಗ, ಅಳ್ಯೋದು ನೆರಳುವದು ಬೈಲು. ಅಳತೆಗೆ ಹೋಗದು, ಹೊಯ್ತಕ್ಕೆ ಸಿಗದು. ರವಿಯಂತೆ ಬದ್ಧವಿಲ್ಲಾ, ಪರಿಪೂರ್ಣ ಪರಂಜ್ಯೋತಿ ಬೈಲು. ಇಂತು ಪರಿಯಲ್ಲಿ ನೂರೆಂಟು ಪರಿಪರಿಯ ಅಷ್ಟಾವರಣದ ವಚನವಾಗಿ ಸುಳ್ಳೆ ಸುಳ್ಳೆನಿಸಿ ಸಾರಿದಿ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.