ಗುರುಚರಮೂರ್ತಿ ಪೂಜಿಸಿಕೊಂಬಲ್ಲಿ
ತಮ್ಮ ವಿವರವ ತಾವರಿಯಬೇಕು.
ಹೆಣ್ಣು ಹೊನ್ನು ಮಣ್ಣು ಹೊರಗೆಂದು ಕೆಲವರಿಗೆ ಹೇಳಿ
ಗನ್ನದಿಂದ ತಾವು ಗಳಿಸಿ ಕೂಡುವುದು,
ಅದು ತಾನೆ ಅನ್ಯಾಯವಲ್ಲವೆ?
ಬಿರಿದ ಕಟ್ಟಿದ ಬಂಟ ಭಾಷೆಗೆ ತಪ್ಪಿದಡೆ,
ರಾಜನ ಮುಖಕ್ಕೆ ಏರಿದಡೆ, ಅದೆ ಭಂಗ.
ಇಂತಿವನರಿಯದೆ ಮೂಗ ಕೊಯಿದು ಮಾರಿ,
ಹಣ್ಣ ಮೆಲುವ ಅಣ್ಣಗಳಿಗೇಕೆ ಗುರುಚರಸ್ಥಲ?
ಇಂತಿವರೆಲ್ಲರು ಸದಾಶಿವಮೂರ್ತಿಲಿಂಗಕ್ಕೆ ಹೊರಗು.