ಎನ್ನ ಮಡದಿ ಹಾಲ ಕಾಸುವಾಗ, ಹಾಲಿನ ಕುಡಿಕೆಯಲ್ಲಿ ಹಾವು ಬಿದ್ದು ಸತ್ತಿತ್ತು.
ಮಡದಿಯ ಬಿಡಬಾರದು, ಹಾಲ ಚೆಲ್ಲಬಾರದು.
ಹಾವಿನ ವಿಷ ಹಾಲಿನಲ್ಲಿ ಸೋರಿತ್ತು, ಇದಕಿನ್ನಾವುದು ತೆರ?
ಕ್ರೀಯ ಬಿಡಬಾರದು, ಅರಿವಿಂಗೆ ಆಶ್ರಯ ಬೇಕು.
ಅರಿವನರಿದೆಹೆನೆಂದಡೆ ಪ್ರಪಂಚಕ್ಕೆ ಒಡಲಾಯಿತ್ತು.
ಹುಲಿ ಬಾವಿ ಹಾವಿನ ಎಡೆಯಲ್ಲಿ ಸಿಕ್ಕಿದ ತೆರ ಎನಗಾಯಿತ್ತು.
ಈ ಸಂದೇಹವ ಬಿಡಿಸು,
ಸದಾಶಿವಮೂರ್ತಿಲಿಂಗವೆ, ನಿನ್ನ ಧರ್ಮ.