Index   ವಚನ - 201    Search  
 
ಜೀವಜ್ಞಾನ ಭಾವಜ್ಞಾನ ಯುಕ್ತಿಜ್ಞಾನ ಚಿತ್ತಜ್ಞಾನ ಶಕ್ತಿಜ್ಞಾನ ಪರಶಕ್ತಿಜ್ಞಾನ ಪರಮಜ್ಞಾನ ಪ್ರಕಾಶಜ್ಞಾನ ಪ್ರಜ್ವಲಿತಜ್ಞಾನ ಪ್ರಭಾವಜ್ಞಾನ ತೇಜೋಮಯಜ್ಞಾನ ಪರಂಜ್ಯೋತಿಜ್ಞಾನ ದಿವ್ಯಜ್ಞಾನ ಸರ್ವಮಯ ಸಂಪೂರ್ಣಂಗಳಲ್ಲಿ ತೋರುತ್ತಿಹ ತೋರಿಕೆ, ಆಕಾಶಮಂಡಲದಲ್ಲಿ ತೋರುವ [ಅ]ರುಣನ ಕಿರಣ, ಸರ್ವಜೀವಜ್ಞಾನ ಪರಿಪೂರ್ಣ ದೃಷ್ಟಿಯಾಗಿ ಕಾಬ ತೆರದಂತೆ, ಎನ್ನ ಪಿಂಡಮಂಡಲದಲ್ಲಿ ದಿವ್ಯತೇಜೋವರುಣ ಕಿರಣಮಯವಾಗಿ, ಒಂದರಲ್ಲಿ ನಿಂದು ಕಾಬುದು ಹಲವಾದಂತೆ, ಎನ್ನ ಮನದ ಮಂದಿರದಲ್ಲಿ ನಿಂದವ ನೀನೊಬ್ಬ ವಿಶ್ವರೂಪಾದೆಯಲ್ಲಾ! ಭೇದಕ್ಕೆ ಅಭೇದ್ಯನಾದೆಯಲ್ಲಾ! ನಿನ್ನನೇನೆಂಬುದಕ್ಕೆಡೆದೆರಪಿಲ್ಲ. ಭಾಗೀರಥಿಯಂತೆ ಆರು ನಿಂದಡೂ ಪ್ರಮಾಳಾದೆಯಲ್ಲಾ! ಎನ್ನ ಮನಕ್ಕೆ ಕಟ್ಟಾಗಿ ನಿಂದೆಯಲ್ಲಾ ಸದಾಶಿವಮೂರ್ತಿಲಿಂಗವೇ.