ಕಂಚುಕೆಖಚಿತ ಆಭರಣ ವಿಲಾಸಿತಂಗಳಿಂದ ಸತಿ
ಪತಿಯ ಮುಂದೆ ಬಂದು ನಿಂದಿರೆ,
ಕಂಗಳು ತುಂಬಿ ನೋಡಿ ಮನಸಿಜ ಮುಯ್ಯಾಂತಂತೆ
ಕೂಟದ ಉಚಿತಕ್ಕೆ ತೊಟ್ಟ ತೊಡಿಗೆ ಹೊರಗಾಗಿ
ಉಭಯವು ನಿರ್ವಾಣವಾಯಿತ್ತು.
ಮಾಡುವ ಕ್ರೀಭಾವ ಹೊರಗಳ ವರ್ತನಶುದ್ಧ ಹೊರಗೆ ನಿಂದಿತ್ತು.
ಕೂಡಿಕೊಂಬ ವಸ್ತು, ಕೂಡುವ ಚಿತ್ತ,
ಉಭಯ ಕಲೆಯಿಲ್ಲದಿರಬೇಕು
ಸದಾಶಿವಮೂರ್ತಿಲಿಂಗವನರಿವುದಕ್ಕೆ.