Index   ವಚನ - 95    Search  
 
ಪೃಥ್ವಿಯಿಂದಾದ ರೂಪು, ಅಪ್ಪುವಿನಿಂದಾದ ಘಟ್ಟಿ, ತೇಜದಿಂದಾದ ರಜಸ್ಸು, ವಾಯುವಿನಿಂದಾದ ಸರ್ವಾತ್ಮ, ಆಕಾಶದಿಂದಾದ ನಿರವಯ. ಇಂತೀ ಪಂಚಭೂತಿಕದಿಂದಾದ ಆತ್ಮನಿಪ್ಪ ಪಿಂಡ[ಸ್ಥಲದಲ್ಲಿ ನಿಂದು], ಸ್ಥೂಲ ಸೂಕ್ಷ್ಮದಿಂದರಿದು, ಕಾರಣದಿಂದ ಕಂಡು, ಇಂತೀ ತ್ರಿವಿಧ, ಆತ್ಮನ ಆಧಾರ ಆವುದೆಂದರಿದು, ಬ್ರಹ್ಮನ ಸೃಷ್ಟಿ, ವಿಷ್ಣುವಿನ ಶಾಂತಿ, ರುದ್ರನ ಘಟಿತ, ಇವ ಮೂರ ಹೊದ್ದದೆಯಿಪ್ಪುದು ಪಿಂಡಜ್ಞಾನಲೇಪ, ಅಂಗದ ನಿರಸನ. ಗುರುವಿನ ಕರಕಮಲದಲ್ಲಿ ಮನದ ನಿರಸನ. ಲಿಂಗದ ಯೋಗದಲ್ಲಿ ಸರ್ವೇಂದ್ರಿಯ ನಿರಸನ. ಶರಣರ ಸಂಸರ್ಗದಲ್ಲಿ ಇಂತಿವನರಿತು, ಮನಬಂದಂತೆ ನಡೆಯದೆ, ವಿಕಾರವೆಂದಂತೆ ಪ್ರಕೃತಿಗೆ ಒಳಗಾಗದೆ, ಮಧುರದಂಡದೊಳಗೆ ಅಡಗಿದ ಸುಧೆಯ ತೆಗೆದು, ಸದೆಯ ಕಳೆವಂತೆ, ಕಳೆದು ಉಳಿಯಬೇಕು, ಪಿಂಡಪ್ರಾಣಲಿಂಗಯೋಗವ. ಇಂತಿವು ಅರಿವವರ[ರುಹು], ಕರಿಗೊಂಡವನ ತೆರ[ನರಿಕೆಯೆ] ತಾ ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವ ಅವಗವಿಸಿದ ಸದಮಲಾಂಗನ ಇರವು.