Index   ವಚನ - 1    Search  
 
ಅಂಗದಲಳವಟ್ಟ ಸುಖವು ಲಿಂಗದಲ್ಲಿ ಲೀಯವಾಗಿ, ಲಿಂಗದಲ್ಲಿ ಲೀಯವಾದ ಸುಖವು ಮಹಾಲಿಂಗದಲ್ಲಿ ಲೀಯವಾಗಿ ಮಹಾಲಿಂಗದಲ್ಲಿ ಲೀಯವಾದ ಸುಖವು ಜ್ಞಾನಮುಖದಲ್ಲಿ ಲೀಯವಾಗಿ, ಜ್ಞಾನಮುಖದಲ್ಲಿ ಲೀಯವಾದ ಸುಖವು ಮಹಾಜ್ಞಾನದಲ್ಲಿ ಲೀಯವಾಗಿ, ಮಹಾಜ್ಞಾನದಲ್ಲಿ ಲೀಯವಾದ ಸುಖವು ಸರ್ವಾಂಗಮುಖದಲ್ಲಿ ಲೀಯವಾಗಿ, ಸರ್ವಾಂಗ[ಮುಖ]ದಲ್ಲಿ ಲೀಯವಾದ ಸುಖವು ಸಮರಸಸಂಗದಲ್ಲಿ ಲೀಯವಾಗಿ, ಸಮರಸಸಂಗದಲ್ಲಿ ಲೀಯವಾದ ಸುಖವು ಐಕ್ಯಸ್ಥಲದಲ್ಲಿ ಲೀಯವಾಗಿ, ಐಕ್ಯಸ್ಥಲದಲ್ಲಿ ಲೀಯವಾದ ಸುಖವು ನಿರಾಕಾರದಲ್ಲಿ ಲೀಯವಾಗಿ, ನಿರಾಕಾರದಲ್ಲಿ ಲೀಯವಾದ ಸುಖವು ನಿಶ್ಶಬ್ದದಲ್ಲಿ ಲೀಯವಾಗಿ, ನಿಶ್ಶಬ್ದದಲ್ಲಿ ಲೀಯವಾದ ಸುಖವು ನಿರಂಜನದಲ್ಲಿ ಲೀಯವಾಗಿ, ನಿರಂಜನದಲ್ಲಿ ಲೀಯವಾದ ಸುಖವು ಪರಬ್ರಹ್ಮದಲ್ಲಿ ಲೀಯವಾಗಿ, ಪರಬ್ರಹ್ಮದಲ್ಲಿ ಲೀಯವಾದ ಸುಖವ ಅಹಂ ಬ್ರಹ್ಮದಲ್ಲಿ, ಲೀಯವ ಮಾಡಿದರು ನಮ್ಮ ಶರಣರು. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತ ಚೆನ್ನಮಲ್ಲಿಕಾರ್ಜುನದೇವಯ್ಯನಲ್ಲಿ ಜನನಮರಣವಿರಹಿತ ನಿಜತತ್ವ ನಿಸ್ಪೃಹ ನಿಃಕಳಂಕ ಮಹಾಶರಣನಲ್ಲದೆ ಮತ್ತೆ ಉಳಿದ ಭೂಲೋಕದ ಭೂಭಾರ ಜೀವಿಗಳಿಗೆ ಅಳವಡುವುದೆ ಮಹಾಲಿಂಗೈಕ್ಯವು ? ಇಂತಪ್ಪ ಮಹಾಲಿಂಗೈಕ್ಯನ ನಿಲವ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.