ಇಷ್ಟಲಿಂಗಕ್ಕೆ ಅಂಗವನರ್ಪಿತವ ಮಾಡಬೇಕು.
ಪ್ರಾಣಲಿಂಗಕ್ಕೆ ಮನವನರ್ಪಿತವ ಮಾಡಬೇಕು.
ಭಾವಲಿಂಗಕ್ಕೆ ತೃಪ್ತಿಯನರ್ಪಿತವ ಮಾಡಬೇಕು.
ಈ ವರ್ಮವನರಿತು ಅರ್ಪಿತವ ಮಾಡಬಲ್ಲಡೆ ಪ್ರಸಾದಿಯೆಂಬೆ.
ಅದೆಂತೆಂದಡೆ:
ಇಷ್ಟಲಿಂಗಾರ್ಪಿತಂ ತ್ವಂಗಂ ಪ್ರಾಣಲಿಂಗಾರ್ಪಿತಂ ಮನಃ
ಭಾವಲಿಂಗಾರ್ಪಿತಾ ತೃಪ್ತಿರಿತಿಭೇದಂ ವರಾನನೇ ||
ಎಂದುದಾಗಿ, ಲಿಂಗಕ್ಕೆಯೂ ತನಗೆಯೂ ಎಡೆದೆರಹಿಲ್ಲ.
ಇದು ಕಾರಣ, ಲಿಂಗ ಸಹಿತವಾಗಿಯೆ ಕೇಳುವ,
ಲಿಂಗಸಹಿತವಾಗಿಯೆ ಘ್ರಾಣಿಸುವ, ಲಿಂಗಸಹಿತವಾಗಿಯೆ ರುಚಿಸುವ,
ಲಿಂಗಸಹಿತವಾಗಿಯೇ ನೋಡುವ, ಲಿಂಗಸಹಿತವಾಗಿಯೆ ಸಂಗ ಮಾಡುವ,
ಲಿಂಗಸಹಿತವಾಗಿಯೆ ತೊಳಗುವ,
ಇಂತಪ್ಪ ಮಹಾಮಹಿಮ ಸದ್ಭಕ್ತನ
ಅಂಗವೆಲ್ಲವೂ ಲಿಂಗ, ಸಂಗಮವೆಲ್ಲವೂ ಲಿಂಗ,
ಅಂಗ ಸಂಗಮವೆಲ್ಲವೂ ಲಿಂಗಸಂಗಗಳಾದ ಕಾರಣ,
ಅಂಗಕ್ರಿಯೆಗಳೆಲ್ಲವೂ ಲಿಂಗಕ್ರಿಯೆಗಳಾದ ಕಾರಣ,
ಅಂಗಭೋಗವೆಲ್ಲವೂ ಲಿಂಗಭೋಗವಾದ ಕಾರಣ,
ಇಂತಪ್ಪ ಮಹಾಮಹಿಮ ಸದ್ಭಕ್ತನ ಶ್ರೀಚರಣಕ್ಕೆ
ಎನ್ನ ಶಿರವನಿರಿಸಿ ಪೂಜಿಸುವೆ ಕಾಣಾ.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಸದ್ಭಕ್ತನ ನಿಲವಿನ ಪರಿಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.