Index   ವಚನ - 11    Search  
 
ಜಂಗಮಪಾದೋದಕವ ಮಜ್ಜನ ಮಾಡಿ, ಪ್ರಸಾದಂಬುವ ಮಾಡಿ, ಎನಗೆನ್ನ ಗುರು ತಂದೆ,ಶಿವ ಕಲ್ಯಾಣವ ಮಾಡಿದ. ಹಿಂಗದಿರು ಕಂಡಾ ಎಂದು ಕಂಕಣವ ಕಟ್ಟಿದ. ಲಿಂಗೈಕ್ಯ ಚೈತನ್ಯ ಪ್ರಸಾದವೆಂದು, ತನಗೆ ಚೈತನ್ಯ ಜಂಗಮವೆಂದು, ನನಗೆ ಚೈತನ್ಯ ಲಿಂಗವೆಂದು ನಿರೂಪಿಸಿದ. ಜಂಗಮ ಪ್ರಸಾದ ಬಸವಣ್ಣನಿಂದಲ್ಲದೆ ದೊರಕೊಳ್ಳದೆಂದು ಬಸವಣ್ಣನ ಸಾರಿದೆ. ಬಸವಣ್ಣ ಮಾಡಿದುಪಕಾರವನೇನ ಹೇಳುವೆನಯ್ಯಾ. ಒಡೆಯರೊಕ್ಕುದ ತಾ ಸವಿದು, ತನ್ನೊಕ್ಕುದ ಮಿಕ್ಕುದ ತನ್ನ ಗೃಹಚರರುಂಡು, ಮಿಕ್ಕ ಶೇಷಪ್ರಸಾದವು ಎನ್ನ ಲಿಂಗಕ್ಕಾಯಿತ್ತು. ಆ ಪ್ರಸಾದ ಗುಂಡವೆ ಗೃಹವಾಯಿತ್ತು. ಆ ಪ್ರಸಾದ [ಅರ್ಪಿಸು]ತ್ತವೆ ಎನ್ನ ಲಿಂಗಕ್ಕೆ ಪೂಜೆ. ಎನಗೆ ಹೊದಿಕೆಯಾಗಿ ಎನ್ನ ತನು ಶುದ್ಧಪ್ರಸಾದವಾಯಿತ್ತು. ಮನ ಸಿದ್ಧಪ್ರಸಾದವಾಯಿತ್ತು. ಗುರುವಾಜ್ಞೆವಿಡಿದೆನಾಗಿ ಆನೆ ಪ್ರಸಿದ್ಧ ಪ್ರಸಾದವಾದೆನಯ್ಯಾ. ಇನ್ನು ಬದುಕಿದೆನು ಕಾಣಾ, ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಶರಣ ಸಿದ್ಧರಾಮಯ್ಯನ ಕಂಡು, ಶಿಖಿಕರ್ಪುರ ಯೋಗದಂತಾದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.