Index   ವಚನ - 15    Search  
 
ತ್ರಿಭುವನಗಿರಿಯರಸರು ತ್ರೈಲೋಕಪಟ್ಟಣಕ್ಕೆ ದಾಳಿಯನಿಕ್ಕಿದರು. ಆ ಪಟ್ಟಣ ಸುತ್ತಿ ಮುತ್ತಿಕೊಂಡರು. ಏಳು ಭೂದುರ್ಗಂಗಳು ಕೊಳಹೋದವು. ಅರಮನೆಯ ಹೊಕ್ಕರು, ಹನ್ನೆರಡುಸಾವಿರ ರಾಣಿವಾಸವ ಸೆರೆ ಹಿಡಿದರು. ಆನೆಯ ಸಾಲೆಗೆ ಕಿಚ್ಚನಿಕ್ಕಿದರು, ಕುದುರೆಗಳ ಕಾಲ ಹರಿಯ ಹೊಯ್ದರು. ನಾಯಿಗಳ ಕಣ್ಣ ಕೆಡಿಸಿದರು, ಹಿರಿಯರಸನ ಹಿಡಿದುಕೊಂಡರು. ಇಪ್ಪತ್ತೈದು ತಳವಾರರ ನಿರ್ಮೂಲಿಸಿ ಬಿಟ್ಟರು. ಮೂವರ ಮೂಗ ಕೊಯ್ದರು, ಒಬ್ಬನ ಶೂಲಕ್ಕೆ ಹಾಕಿದರು. ಆ ಪಟ್ಟಣದ ಲಕ್ಷ್ಮಿ ಹಾರಿತ್ತು. ಆ ಪಟ್ಟಣದ ಪ್ರಜೆಗಳಿಗೆ ರಣಮಧ್ಯ ಮರಣವಾಯಿತ್ತು. ಆ ರಣಭೂಮಿಯಲ್ಲಿಕಾಡುಗಿಚ್ಚೆದ್ದುರಿಯಿತ್ತು. ಆ ಊರ ನಡುಗಡೆಯಲ್ಲಿ ಒಬ್ಬ ಬೇತಾಳ ನಿಂದಿರ್ದ. ಆ ಬೇತಾಳನ ಮೇಲೆ ಅಕಾಲವರುಷ ಸುರಿಯಿತ್ತು. ಆ ವರುಷದಿಂ ಹದಿನಾಲ್ಕು ಭುವನ, ಸಚರಾಚರಂಗಳಿಗೆ ಶಾಂತಿಯಾಯಿತ್ತು. ಆ ಶಾಂತಿ ವಿಶ್ರಾಂತಿಯಲ್ಲಿ ಹುಟ್ಟಿದ ಸುಖವ, ನಿಮ್ಮ ಉಂಗುಷ್ಟಾಗ್ರದಲ್ಲಿ ಕಂಡ ಘನ[ವ], ಸುರಗಿಯ ಚೌಡಯ್ಯಗಳು ಬಲ್ಲರಲ್ಲದೆ, ನಾನೆತ್ತ ಬಲ್ಲೆನಯ್ಯಾ. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.