Index   ವಚನ - 14    Search  
 
ತನುವಿನೊಳಗೆ ತನು ಸವೆಯದೆ, ಮನದೊಳಗೆ ಮನ ಸವೆಯದೆ, ಧನದೊಳಗೆ ಧನ ಸವೆಯದೆ, ಅನುಮಾನವರಿತು ಘನವ ಬೆರೆಸದೆ, ತಮತಮಗೆ ಅರಿದೆಹೆನೆಂಬವರಿಗೆಲ್ಲರಿಗೆಯೂ ಕನಸಿನ ಲಿಂಗತನುವ ಗುರುವಿನಲ್ಲಿ ಸವೆದು, ಮನವ ಲಿಂಗದಲ್ಲಿ ಸವೆದು, ಧನವ ಜಂಗಮದಲ್ಲಿ ಸವೆದು, ಅನುಮಾನವರಿತು ಘನವ ಬೆರಸಬಲ್ಲ ಶರಣನ ಪರಿ ಬೇರೆ. ತನುವ ವಿವರಿಸಿ ನೋಡಿದಡೆ ತನು ಶುದ್ಧವಲ್ಲ. ಮನವ ವಿವರಿಸಿ ನೋಡಿದಡೆ ಮನ ಶುದ್ಧವಲ್ಲ. ಧನವ ವಿವರಿಸಿ ನೋಡಿದಡೆ ಧನ ಶುದ್ಧವಲ್ಲ. ಇಂತೀ ತ್ರಿವಿಧವನು ವಿಚಾರಿಸಿ ನೋಡಿದಡೆ, ಆವುದೂ ಶುದ್ಧವಲ್ಲ ಕೇಳಿರಣ್ಣಾ. ಈ ತ್ರಿವಿಧವನು ತ್ರಿವಿಧಕ್ಕೆ ಇತ್ತಡೆ, ತ್ರಿವಿಧ ಶುದ್ಧವಾಯಿತ್ತು. ಇಂತೀ ತ್ರಿವಿಧವನು ತ್ರಿವಿಧದಲ್ಲಿ ಸವೆಸುವ ಭಕ್ತನ ತ್ರಿವಿಧ ಪ್ರಸಾದವನು ತ್ರಿಕಾಲದಲ್ಲಿ ನಾನು ಕೊಂಡು ಬದುಕಿದೆನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ನಿಮ್ಮ ತ್ರಿವಿಧ ಭಕ್ತನ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.