Index   ವಚನ - 26    Search  
 
ಶಿಷ್ಯನೆಂಬ ಧರೆಯ ಮೇಲೆ, ಶ್ರೀಗುರುವೆಂಬ ಬೀಜವ ಬಿತ್ತಿ, ಅರಿವೆಂಬ ಗೊಬ್ಬರನಿಕ್ಕಿ, ಜ್ಞಾನವೆಂಬ ಉದಕವನೆರೆಯಲಿಕೆ, ಲಿಂಗವೆಂಬ ಆಕಾರ ಮೊಳೆದೋರಿತ್ತು ಕಾಣಿರೆ. ಜಂಗಮವೆಂಬ ಸಸಿ ಬಲಿದು ವೃಕ್ಷ ಪಲ್ಲವಿಸಿತ್ತು. ಸುಜ್ಞಾನವೆಂಬ ನನೆದೋರಿ ಬಿರಿಮುಗುಳಾಯಿತ್ತು. ಮಹಾಜ್ಞಾನವೆಂಬ ಪುಷ್ಪ ವಿಕಸಿತವಾಯಿತ್ತು. ಖಂಡಿತವೆಂಬ ಮುಗುಳಾಯಿತ್ತು, ಅಖಂಡಿತವೆಂಬ ಕಾಯಿ ಬಲಿಯಿತ್ತು. ಪರಮಜ್ಞಾನವೆಂಬ ಹಣ್ಣಾಯಿತ್ತು. ಆ ಹಣ್ಣು ಬಲಿದು ತೊಟ್ಟುಬಿಟ್ಟು, ಬಟ್ಟಬಯಲಲ್ಲಿ ಬಿದ್ದಿತ್ತು. ಆ ಹಣ್ಣು ಕಂಡು ನಾನು ಇದೆಲ್ಲಿಯದೆಂದು ವಿಚಾರವ ಮಾಡಲ್ಕೆ, ಬಿತ್ತಿದವರಾರೆಂದು ಹೇಳುವರಿಲ್ಲ. ಬಿತ್ತಿದವನ ಸೊಮ್ಮ ನಾವು ಕೇಳಬಾರದೆಂದು ಆ ಹಣ್ಣು ಕೊಂಡು, ನಾನು ಬಿತ್ತಿದಾತನನರಸಿಕೊಂಡು ಹೋಗಲ್ಕೆ, ನಾನೆತ್ತ ಹೋದೆನೆಂದರಿಯೆನಯ್ಯಾ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ ನಿಮ್ಮ ಬಿತ್ತಿದಾತನ ಪರಿಯ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.