Index   ವಚನ - 31    Search  
 
ಸರ್ಪನ ಹೆಡೆಯ ಮೇಲೆಪ್ಪತ್ತೇಳುಲೋಕವ ಕಂಡೆನಯ್ಯಾ. ಎಪ್ಪತ್ತೇಳು ಲೋಕದೊಳಗಿಪ್ಪ ಎಪ್ಪತ್ತೇಳು ಕರ್ಪುರದ ಗಿರಿಗಳ ಕಂಡೆನಯ್ಯಾ. ಎಪ್ಪತ್ತೇಳು ಕರ್ಪುರದ ಗಿರಿಗಳ ಮೇಲಿಪ್ಪ ಎಪ್ಪತ್ತೇಳು ಉರಿಯ ಕಂಬವ ಕಂಡೆನಯ್ಯಾ. ಆ ಎಪ್ಪತ್ತೇಳು ಉರಿಯ ಕಂಬದ ಮೇಲಿಪ್ಪ ಎಪ್ಪತ್ತೇಳು ಅರಗಿನ ಪುತ್ಥಳಿಯ ಕಂಡೆನಯ್ಯಾ. ಆ ಎಪ್ಪತ್ತೇಳು ಅರಗಿನ ಪುತ್ಥಳಿಯು ಕರಗಿಹೋದವು. ಆ ಎಪ್ಪತ್ತೇಳು ಕರ್ಪುರದ ಗಿರಿಗಳೆಲ್ಲಾ ಉರಿದುಹೋದವು. ಆ ಎಪ್ಪತ್ತೇಳು ಲೋಕವೆಲ್ಲವು ಹಾಳಾಗಿಹೋದವು. ಆ ಸರ್ಪ ಬೆಂದು ಸತ್ತುಹೋಯಿತ್ತು. ಇನ್ನು ನಿಃಪತಿ ನಿರಾಳವೆಂಬ ನಿಜ ಒಳಕೊಂಡ ಬಳಿಕ, ನಾನೆತ್ತ ಹೋದೆನೆಂದರಿಯೆನಯ್ಯಾ. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಸರ್ಪನ ಪರಿಯ ನೀವೇ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.