Index   ವಚನ - 30    Search  
 
ಸಂಸಾರವೆಂಬ ಸಾಗರವ ದಾಂಟುವಡೆ, ಅರಿವೆಂಬ ಹರುಗೋಲನಿಕ್ಕಿ ಜ್ಞಾನವೆಂಬ ಅಂಬಿಗ ಹರುಗೋಲದಲ್ಲಿ ಕುಳ್ಳಿರ್ದು, ಸುಜ್ಞಾನವೆಂಬ ಘಾತದ ಗಳೆಯ ಪಿಡಿದು, ನಾನೀ ಹೊಳೆಯ ಕಂಡು, ಅಂಬಿಗನು ಕೇಳಿದಡೆ, ನಾನು ಹಾಸಿಕೊಟ್ಟೆಹೆನೆಂದನು. ನಾನು ನಿನ್ನ ನಂಬಿ ಹರುಗೋಲನೇರಿದೆನು ಕಾಣಾ, ಅಂಬಿಗರಣ್ಣಾಯೆಂದು ನಾನು ಹರುಗೋಲದಲ್ಲಿ ಕುಳ್ಳಿರ್ದು ಹೊಳೆಯೊಳಗೆ ಹೋಗಲಿಕೆ, ಕಾಮವೆಂಬ ಕೊರಡು ಅಡ್ಡಬಿದ್ದಿತ್ತು. ಕ್ರೋಧವೆಂಬ ಸುಳುಹಿನೊಳಗೆ ಅಹಂಕಾರವೆಂಬ ಮೀನು ಬಂದು ನಿಂದಿತ್ತು. ಮಾಯೆಯೆಂಬ ಮೊಸಳೆ ಬಂದು ಬಾಯಬಿಡುತ್ತಿದ್ದಿತ್ತು. ಮೋಹವೆಂಬ ನೊರೆತೆರೆಗಳು ಹೆಚ್ಚಿ ಬರುತ್ತಿದ್ದಿತ್ತು. ಲೋಭವೆಂಬ ಕಾಳ್ಗಡಲು ಎಳೆದೊಯ್ವುತ್ತಿದ್ದಿತ್ತು. ಮರವೆಂಬ ಮೊರಹು ನೂಕುತ್ತಲಿದ್ದಿತ್ತು. ಮತ್ಸರವೆಂಬ ಗಾಳಿ ತಲೆಕೆಳಗು ಮಾಡುತ್ತಿದ್ದಿತ್ತು. ಇವೆಲ್ಲವನೂ ಪರಿಹರಿಸಿ, ಎನ್ನ ಹೊಳೆಯ ದಾಂಟಿಸಿದನು ಅಂಬಿಗರಣ್ಣನು. ಈ ಹೊಳೆಯ ದಾಂಟಿಸಿದ ಕೂಲಿಯ ನನ್ನ ಬೇಡಿದಡೆ, ಕೂಲಿಯ ಕೊಡುವಡೇನೂ ಇಲ್ಲೆಂದಡೆ, ಕೈಸೆರೆಯಾಗಿ ಎನ್ನನೆಳದೊಯ್ದನಯ್ಯಾ. ಅರುವೆಯ ಕೊಟ್ಟ ಕೂಲಿಗೆ ತನ್ನ ಕರುವ ಕಾಯಿಸಿಕೊಂಡನಯ್ಯಾ. ಅರಿಯದೆ ಹರುಗೋಲವ ನೆರೆತೊರೆಯ ದಾಂಟಿಸಿದ ಕೂಲಿಗೆ ಕರುವ ಕಾಯಿದೆನು ಕಾಣಾ, ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.