ಹೆಣ್ಣಿನೊಳಗೆ ಕಣ್ಣುಗೊಂಡು ಹುಟ್ಟಿ, ಮಣ್ಣು ಹೊಯ್ದುಕೊಂಬ
ಅಣ್ಣಗಳು ನೀವು ಕೇಳಿರೆ.
ಈ ಬಣ್ಣದ ಪರಿಯಾಯಕ್ಕೆ ಕಣ್ಣುಗೆಟ್ಟು ಬಿದ್ದಿರಲ್ಲಾ.
ಈ ಹೆಣ್ಣಿನ ಸಂಗ ನಿಮಗೇತಕಣ್ಣಾ.
ತನ್ನಲ್ಲಿ ಹೆಣ್ಣುಂಟು, ತನ್ನಲ್ಲಿ ಹೊನ್ನುಂಟು, ತನ್ನಲ್ಲಿ ಮಣ್ಣುಂಟು.
ಇಂತಿವ ನಿಮ್ಮಲ್ಲಿ ನೀವು ತಿಳಿದು ನೋಡಲಿಕ್ಕೆ,
ತನ್ನಲ್ಲಿ ತಾನೆ ಕಾಣಬಹುದು.
ತನ್ನ ತಾನರಿಲ್ಲದೆ ಇದಿರನರಿಯಬಾರದು.
ಇದಿರನರಿದಲ್ಲದೆ ಪರವನರಿಯಬಾರದು.
ಪರವನರಿದಲ್ಲದೆ ಸ್ವಯವನರಿಯಬಾರದು.
ಸ್ವಯವನರಿದಲ್ಲದೆ ಅರಿವು ತಲೆದೋರದು
ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು.
ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು.
ಮಾಯ ಹಿಂಗಿದಲ್ಲದೆ ಮದವಳಿಯದು.
ಮದವಳಿದಲ್ಲದೆ ಮತ್ಸರ ಹೆರೆಸಾರದು.
ಮತ್ಸರ ಹೆರೆಸಾರಿದಲ್ಲದೆ ಮಹಾಘನವಳವಡದು.
ಮಹಾಘನವಳವಟ್ಟಲ್ಲದೆ ಮಹಾಲಿಂಗವ ಕಾಣಬಾರದು.
ಮಹಾಲಿಂಗವ ಕಂಡಲ್ಲದೆ ಮಹಾಪ್ರಕಾಶವ ಕಾಣಬಾರದು.
ಮಹಾಪ್ರಕಾಶವ ಕಂಡಲ್ಲದೆ ನಿತ್ಯವ ಕಾಣಬಾರದು.
ನಿತ್ಯವ ಕಂಡಲ್ಲದೆ ನಿಜವ ಕಾಣಬಾರದು.
ನಿಜವ ಕಂಡಲ್ಲದೆ ನಿರ್ಣಯವನರಿಯಬಾರದು.
ನಿರ್ಣಯವನರಿದಲ್ಲದೆ ಗುರುಲಿಂಗಜಂಗಮವನರಿಯಬಾರದು.
ಗುರುಲಿಂಗಜಂಗಮವನರಿದಲ್ಲದೆ ಪಾದತೀರ್ಥಪ್ರಸಾದವನರಿಯಬಾರದು.
ಪಾದತೀರ್ಥಪ್ರಸಾದವನರಿದಲ್ಲದೆ ಸಹಜ ಶರಣರ ಸಂಗವನರಿಯಬಾರದು.
ಇಂತಪ್ಪ ಶರಣರ ಸಂಗವನರಿದಲ್ಲದೆ ಸರ್ವನಿರ್ಣಯವನರಿಯಬಾರದು.
ಸರ್ವನಿರ್ಣಯವನರಿದಲ್ಲದೆ ಸಹಜಸದ್ಭಕ್ತರು ಮೆಚ್ಚರು.
ಸಹಜಸದ್ಭಕ್ತರು ಕೂಡಿ ನಡೆಯಬಲ್ಲಡೆ ಇದೇ ಸುಖವು.
ಸಂಗದೊಳಗೆ ಶರಣರ ಸಂಗವೆ ಸಂಗವು ಕೇಳಿರಯ್ಯಾ.
ಇಂತು ಸಾಯದೆ ನೋಯದೆ ಸ್ವಯವನರಿದು,
ಸದ್ಭಕ್ತರ ಸಂಗವ ಮಾಡಬಲ್ಲಾತನೆ ಲಿಂಗೈಕ್ಯನು.
ಅವ ತಾನೆ ಘನಲಿಂಗವು.
ಹೀಂಗಲ್ಲದೆ ಹಿಂದೆ ಮೆಟ್ಟಿಹೋಹ ಸಂದೇಹಿ ಮಾನವರೆಲ್ಲರೂ
ಜಗದ ಜಂಗುಳಿಗಳ ದಂದುಗದೊಳಗಾಗಿಪ್ಪರು.
ಆ ಗುಣವ ಬಿಟ್ಟು, ಶರಣರ ಸಂಗ ಸಹಜವೆಂದರಿದು,
ನಿಜವಾಗಿ ಬಂದಬಳಿಕ ಪೂರ್ವಭಾಗೆಗೆ ಬಾರೆನೆಂಬ ನಿಶ್ಚಯದಿಂ
ಪರಮ ಪ್ರಸಾದವನರಿದು, ಜಗದ ಹಂಗ ಹರಿದ ಶರಣನು
ಎನ್ನ ತಂದೆಯಾಗಿಪ್ಪನು ಕಾಣಾ, ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ
ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ.
ಈ ಬಂದ ಪರಿಯಾಯವರಿದು, ತಾಮಸವ ಹಿಂಗಿ,
ಸಹಜ ನಿಜನಿತ್ಯವನರಿದು ಹೋದ ಶರಣರ
ನಿಲವಿನ ಪರಿಯ, ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ,
ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
Art
Manuscript
Music
Courtesy:
Transliteration
Heṇṇinoḷage kaṇṇugoṇḍu huṭṭi, maṇṇu hoydukomba
aṇṇagaḷu nīvu kēḷire.
Ī baṇṇada pariyāyakke kaṇṇugeṭṭu biddirallā.
Ī heṇṇina saṅga nimagētakaṇṇā.
Tannalli heṇṇuṇṭu, tannalli honnuṇṭu, tannalli maṇṇuṇṭu.
Intiva nim'malli nīvu tiḷidu nōḍalikke,
tannalli tāne kāṇabahudu.
Tanna tānarillade idiranariyabāradu.
Idiranaridallade paravanariyabāradu.
Paravanaridallade svayavanariyabāradu.
Svayavanaridallade arivu taledōradu
arivu taledōridallade kuruhu naṣṭavāgadu.
Kuruhu naṣṭavādallade māye hiṅgadu.
Māya hiṅgidallade madavaḷiyadu.
Madavaḷidallade matsara heresāradu.
Matsara heresāridallade mahāghanavaḷavaḍadu.
Mahāghanavaḷavaṭṭallade mahāliṅgava kāṇabāradu.
Mahāliṅgava kaṇḍallade mahāprakāśava kāṇabāradu.
Mahāprakāśava kaṇḍallade nityava kāṇabāradu.
Nityava kaṇḍallade nijava kāṇabāradu.
Nijava kaṇḍallade nirṇayavanariyabāradu.
Nirṇayavanaridallade guruliṅgajaṅgamavanariyabāradu.
Guruliṅgajaṅgamavanaridallade pādatīrthaprasādavanariyabāradu.
Pādatīrthaprasādavanaridallade sahaja śaraṇara saṅgavanariyabāradu.
Intappa śaraṇara saṅgavanaridallade sarvanirṇayavanariyabāradu.
Sarvanirṇayavanaridallade sahajasadbhaktaru meccaru.
Sahajasadbhaktaru kūḍi naḍeyaballaḍe idē sukhavu.
Saṅgadoḷage śaraṇara saṅgave saṅgavu kēḷirayyā.
Intu sāyade nōyade svayavanaridu,
Sadbhaktara saṅgava māḍaballātane liṅgaikyanu.
Ava tāne ghanaliṅgavu.
Hīṅgallade hinde meṭṭihōha sandēhi mānavarellarū
jagada jaṅguḷigaḷa dandugadoḷagāgipparu.
Ā guṇava biṭṭu, śaraṇara saṅga sahajavendaridu,
nijavāgi bandabaḷika pūrvabhāgege bārenemba niścayadiṁ
parama prasādavanaridu, jagada haṅga harida śaraṇanu
enna tandeyāgippanu kāṇā, śud'dha sid'dha prasid'dha prasanna prabhuve
Śāntacennamallikārjunadēvayyā.
Ī banda pariyāyavaridu, tāmasava hiṅgi,
sahaja nijanityavanaridu hōda śaraṇara
nilavina pariya, nīve ballirallade nānetta ballenayyā,
nim'ma dharma nim'ma dharma nim'ma dharma.