Index   ವಚನ - 1008    Search  
 
ಒಂದು ಮುಳ್ಳ ಮೊನೆಯ ಮೇಲೆ ಎಂಬತ್ನಾಲ್ಕು ಲಕ್ಷ ಪಟ್ಟಣವ ಕಟ್ಟಿ, ಈ ಎಂಬತ್ನಾಲ್ಕು ಲಕ್ಷ ಪಟ್ಟಣಕ್ಕೆ ತಲೆಯಿಲ್ಲದ ತಳವಾರ, ಆ ತಲೆಯಿಲ್ಲದ ತಳವಾರನ ತಂಗಿ ಮಾತಿನಲಿ ಕಡುಜಾಣೆ. ಆಕೆ ಸರ್ಪನ ಸಿಂಬೆಯ ಮಾಡಿಕೊಂಡು ತಳವಿಲ್ಲದ ಕೊಡನ ತಕ್ಕೊಂಡು ಜಲವಿಲ್ಲದ ಬಾವಿಗೆ ನೀರಿಗೆ ಹೋದಳು. ಆ ಜಲವಿಲ್ಲದ ಬಾವಿಯೊಳೊಂದು ಬೇರಿಲ್ಲದ ಸಸಿ ಪುಟ್ಟಿತ್ತು. ಆ ಬೇರಿಲ್ಲದ ಸಸಿ ವೃಕ್ಷವಾಗಿರಲಾ ವೃಕ್ಷವ ಕಾಲಿಲ್ಲದ ಮೃಗ ಏರಿ ಹೋಗುತ್ತಿತ್ತು. ಅದ ಕಣ್ಣಿಲ್ಲದ ಕುರುಡ ಕಂಡ. ಕೈಯಿಲ್ಲದ ಪುರುಷ ಹೆದೆಯಿಲ್ಲದ ಬಿಲ್ಲ ಪಿಡಿದು, ಅಲಗಿಲ್ಲದಂಬಿನಲ್ಲೆಸೆಯಲಾ ಮೃಗವ ತಾಕಲಿಲ್ಲ. ಅದರ ಹೊಟ್ಟೆಯೊಳಗಿರ್ದ ಪಿಂಡಕ್ಕೆ ತಾಕಿತ್ತು. ಇದ ಕಂಡು ಬೆರಗಾದ ನಮ್ಮ ಗುಹೇಶ್ವರ.