ವಚನ - 1036     
 
ಕಡುಜಲಕ್ಕೆ ಇದಿರಾಗಿ ಹರಿವ ಸ್ವಾಮಿಯ ಬರವ ಕಂಡು, ಬಿಡದೆ ಬೆಂಬತ್ತಿಸುವ ಪರಿಯ ನೋಡಾ. ನಡೆ ನುಡಿ ಚೈತನ್ಯ ಒಡಲನೊಂದನು ಮಾಡಿ ಬಿಡದೆ ವೇಧಿಸುವ ಬೆಡಗ ಕಂಡೆನಯ್ಯಾ! ಕಡೆಗೆ ಸೂಸದ ದೃಷ್ಟಿ, ಹಿಡಿದು ತೊಲಗದ ಹಸ್ತ, ಬಿಡಬೇಡ ತನಗೆನ್ನದ ಸಜ್ಜನ ಮಡದಿ, ತನ್ನ ಗಂಡನ ಅಡಗಿ ಕೂಡುವ ಭೇದ! ನಡುವಿರುಳು ಕೂಡಿ ನಿಮಿರೆ ಬೆಳಗಾಯಿತ್ತು. ಮಾಡಿ ನೀಡುವನ ಕಂಡು ನಾಡು ಬೀಡೆಲ್ಲ ನೆರೆದು ಕೊಡ ಕೈಯಲ್ಲಿ ಕೊಟ್ಟಡೆ ತೃಪ್ತರಾಗಿ, ಮಾಡುವರು ಹರಸುವರು ನೋಡುವರು ಮನದಣಿಯೆ ಕೊಡುವರು ಕೋಟಿ, ಸಹಜ ಒಂದೆ ಎಂದು! ಜೋಡ ತೊಡದಾತನ ಮೈಯಲ್ಲಿ, ಕೂಡೆ ಘಾಯವಿಲ್ಲದುದ ಕಂಡು, ನೋಡಿರೆ ಮಸೆ ಮುಟ್ಟದ ಮಹಾಂತನ! ಬೇಡುವೆನು ಕರುಣವನು, ಪಾದ [ವ]ನೊಸಲಲ್ಲಿ ಸೂಡುವೆನು. ಗುಹೇಶ್ವರನ ಶರಣ ಬಸವಣ್ಣಂಗೆ ನಮೋ ನಮೋ ಎಂಬೆನು.