Index   ವಚನ - 1115    Search  
 
ಕೀರ್ತಿವಾರ್ತೆಗೆ ಮಾಡುವಾತ ಭಕ್ತನಲ್ಲ. ಪರರ ಬೋಧಿಸಿಕೊಂಡುಂಬಾತ ಜಂಗಮವಲ್ಲ. ತ್ರಿಸಂಧ್ಯಾಕಾಲವೆಂದು ಪ್ರಸಾದವನಿಕ್ಕುವಾತ ಗುರುವಲ್ಲ. ತ್ರಿಸಂಧ್ಯಾಕಾಲವೆಂದು ಪ್ರಸಾದವ ಕೊಂಬಾತ ಶಿಷ್ಯನಲ್ಲ. ಪರಗಮನವಿರಹಿತ ಜಂಗಮ, ಕಾಲಕರ್ಮವಿರಹಿತ ಪ್ರಸಾದಿ, ಪ್ರಸಾದವ ಇಕ್ಕಿಯೂ ಇಕ್ಕದಾತ ಗುರು, ಕೊಂಡೂ ಕೊಳ್ಳದಾತ ಶಿಷ್ಯ. ಆ ಭಕ್ತನಲ್ಲಿಯೆ ನಿಕ್ಷೇಪಿಸಿ ನಿರ್ಗಮನಿಯಾಗಿ ಹೋದಾತ ಜಂಗಮ. ಆ ಜಂಗಮಕ್ಕೆ ಅರ್ಥಪ್ರಾಣಾಭಿಮಾನವಿಡಿದು ಮಾಡುವಾತ ಭಕ್ತ ಇಂತೀ ಚತುರ್ವಿಧದನುವನು, ಗುಹೇಶ್ವರಲಿಂಗದನುವನು ವೇಷಧಾರಿಗಳೆತ್ತ ಬಲ್ಲರು? ಬಸವಣ್ಣನೊಬ್ಬನೆ ಬಲ್ಲನಲ್ಲದೆ.