ವಚನ - 1287     
 
ನಿಧಾನವ ಸಾಧಿಸಿದವರಿಗೆ ವಿಗುರ್ಬಣೆ ಕಾಡುವುದು. ಅದಕ್ಕಂಜಲಾಗದು ಬೆಚ್ಚಲಾಗದು ಬೆದರಲಾಗದು. ಹೊನ್ನು ಹೆಣ್ಣು ಮಣ್ಣು ಈ ತ್ರಿವಿಧಮಾಯವ ತೋರಿ, ಹೆರತೆಗೆಸುವನಾಗಿ! ಸತಿಪುರುಷಸಂಯೋಗದ ವೇಳೆಯಲ್ಲಿ ಜೀವಧನ ಬಿಟ್ಟುಕೊಂಡು ಮಡಕೆಯನೂಕುವುದು. ಇದಿರ ಜೀವಧನ ಬಿಟ್ಟುಕೊಂಡು ಮನೆಯ ಹಿಂದನುಚ್ಚುವುದು. ಬೆಕ್ಕು ನೆಲಹಿಗೆ ತುಡುಕುವುದು. ನಾಯಿ ಮನೆಯ ಹೊರಗೆ ಹೊಂಚಿಕೊಂಡಿಹುದು. ಮಗುವು ಮೊಲೆಗೆ ಅಳುವುದ ಕೇಳಿ- ಇವೆಲ್ಲವ ಸಂತವಿಟ್ಟು ಬಂದು ಪುರುಷನ ನೆರೆವಳು, ಇದು ಸಜ್ಜನಸ್ತ್ರೀಯ ಲಕ್ಷಣವು! ಇಂತಪ್ಪ ಆ ತವಕ ನಿನಗಳವಟ್ಟಿತ್ತು ಬಸವಾ ಆ ಗುಹೇಶ್ವರನ ಸಂಯೋಗದ ವೇಳೆಯಲ್ಲಿ!