ವಚನ - 1325     
 
ಪಂಚವರ್ಣದಬಿಂದು ಪ್ರಪಂಚವನಳಿದುಳಿದಿರಲು, ಸಂಚರಿಸುವಡೆ ಆವೆಡೆಯೂ ಇಲ್ಲ. ನಿಂದ ಚಿತ್ತಿನ ಪ್ರಭೆ ಅಂಗವನು ನೆರೆ ನುಂಗೆ, ಹಿಂದು ಮುಂದು ಎಡಬಲನೆಂಬುದಿಲ್ಲ! ಅಡಿಯಾಕಾಶವೆಂಬುದಿಲ್ಲ! ಕೆಳಗೆ ನಿಲಲು, ಆಧಾರ ಮೊದಲಿಂಗಿಲ್ಲ ಕಡೆಗೆ ಸಾರುವೆನೆನಲು ಊರ್ಧ್ವವಿಲ್ಲ. ನಡುವೆ ನಾನಿದ್ದಿಹೆನೆಂದಡೆ, ತನ್ನೊಡಲೊಳಗೆ ಒಡೆದು ಮೂಡಿತ್ತು ತನ್ನಂತೆ ಬಯಲು! ಈ ಬೆಡಗು ಬಿನ್ನಾಣವ ಬಡವರರಿವರೆ? ಇದನರಿದು ನುಡಿದು ತೋರಿದನು ಗುಹೇಶ್ವರನ ಶರಣ ಚೆನ್ನಬಸವಣ್ಣನು.