Index   ವಚನ - 1333    Search  
 
ಪರುಷವ ತಂದು ಕಬ್ಬುನಕ್ಕೆ ಮುಟ್ಟಿಸಲು ಚಿನ್ನವಪ್ಪುದಲ್ಲದೆ ಪರುಷವಾಗಬಲ್ಲುದೆ? ಈ ಲೋಕದ ಮನುಜರು ಶಿವಲಿಂಗವ ಕಟ್ಟಿದರೇನು, ಲಿಂಗವಂತರಲ್ಲದೆ ಪ್ರಾಣಲಿಂಗಸಂಬಂಧಿಗಳಾಗಬಲ್ಲರೆ? ಶರಣ ಆವ ಕುಲದಲ್ಲಿ ಹುಟ್ಟಿದರೇನು ಆತನು, ಆಚಾರ ವೀರಶೈವಸಂಪನ್ನ ಸಿದ್ಧಾಂತ ಕ್ರಿಯಾ ಜ್ಞಾನ ಅನುಭಾವಯುಕ್ತವಾದ ಪ್ರಾಣಲಿಂಗಸಂಪನ್ನ. ಆದಿ ಅನಾದಿಯಿಲ್ಲದಂದಿನ ನಿಃಕಲ ನಿಶ್ಶೂನ್ಯ ನಿರ್ಭೇದ್ಯ ನಿರಾಳ ನಿರಂಜನ ಪರಾತ್ಪರತರನು ತಾನೆ ನೋಡಾ. ಅಂತಪ್ಪ ಮಹಾತ್ಮನ ಕುಲಜನಕುಲಜನೆಂದು ಸಂದೇಹ ಸಂಕಲ್ಪದಿಂದ ದೂಷಿಸಿ ಜರೆವ ದುರಾಚಾರಿ [ಗಳ] ಬಾಯಲ್ಲಿ ಬಾಲಹುಳ ಸುರಿಯದೆ ಮಾಣ್ಬುದೆ ಗುಹೇಶ್ವರಾ.