ವಚನ - 1339     
 
ಪೂರ್ವಗುಣವನೆಲ್ಲ ಅಳಿದು ಪುನರ್ಜಾತನಾದ ಬಳಿಕ ಗುರುವಿನ ಕರಸ್ಥಲದಲ್ಲಿ ಉತ್ಪತ್ತಿ ಸದ್ಭಕ್ತರಲ್ಲಿ ಸ್ಥಿತಿ, ಲಿಂಗದಲ್ಲಿ ಲಯ. ಇಂತೀ ನಿರ್ಣಯವನರಿಯದೆ, ಶೀಲವಂತರ ಶೀಲ ತಪ್ಪಿದಡೆ ಹೇಳಬಹುದೆ? ಹೇಳಬಾರದು. ಸೂಳೆ ಮುತ್ತು ಗೊರವಿತಿಯಾದಂತೆ, ಬಂಟ ಮುತ್ತು ಬಾಗಿಲಕಾಯ್ದಂತೆ, ನರಿ ಮುತ್ತು ಬಳ್ಳಾದಂತೆ, ಹಾವು ಮುತ್ತು ಸಿಂಗಿಯಾದಂತೆ! ಎಲ್ಲ ದೇವರಿಗೆ ಮಸ್ತಕ ಪೂಜೆ ಜಂಗಮದೇವರಿಗೆ ಪಾದಪೂಜೆ. ಪಾದೋದಕ ಪ್ರಸಾದವ ಕೊಡುವ ಜಂಗಮದೇವರು, ಕಂಠಪಾವಡ ಧೂಳಪಾವಡ ಸರ್ವಾಂಗಪಾವಡ ಶೀಲಸಂಬಂಧವೆಂದಡೆ ಕೇಸರಿ ಶುನಕನಾದಂತೆ ಕಾಣಾ ಗುಹೇಶ್ವರಾ.