ವಚನ - 1363     
 
ಬಯಲ ಮೂರ್ತಿಗೊಳಿಸಿದನೊಬ್ಬ ಶರಣ. ಆ ಮೂರ್ತಿಯಲ್ಲಿ ಭಕ್ತಿಸ್ವಾಯತವ ಮಾಡಿದನೊಬ್ಬ ಶರಣ. ಆ ಭಕ್ತಿಯನೆ ಸುಜ್ಞಾನ ಮುಖವ ಮಾಡಿದನೊಬ್ಬ ಶರಣ. ಆ ಸುಜ್ಞಾನವನು ಲಿಂಗಮುಖವಾಗಿ ಧರಿಸಿದನೊಬ್ಬ ಶರಣ. ಆ ಲಿಂಗವನೆ ಸರ್ವಾಂಗದಲ್ಲಿ ವೇಧಿಸಿಕೊಂಡನೊಬ್ಬ ಶರಣ. ಆ ಸರ್ವಾಂಗವನೆ ನಿರ್ವಾಣಸಮಾಧಿಯಲ್ಲಿ ನಿಲಿಸಿದನೊಬ್ಬ ಶರಣ. ನಾನು ನಿರ್ವಾಣದಲ್ಲಿ ನಿಂದು ಅಗಮ್ಯನಾದೆನೆಂದಡೆ, ಭಕ್ತಿಕಂಪಿತನೆನಿಸಿ ಎನ್ನ ತನ್ನಲ್ಲಿಗೆ ಬರಿಸಿಕೊಂಡನೊಬ್ಬ ಶರಣ. ಗುಹೇಶ್ವರಾ, ನಿಮ್ಮ ಶರಣ ಸಂಗನಬಸವಣ್ಣನ ಶ್ರೀಪಾದವ ಕಂಡು ಶರಣೆಂದು ಬದುಕಿದೆನು.