ವಚನ - 1434     
 
ಮರಹು ಬಂದಹುದೆಂದು ಶ್ರೀಗುರು ಕರಸ್ಥಲಕ್ಕೆ ಕುರುಹ ಕೊಟ್ಟಡೆ; ಆ ಕುರುಹು ನೋಟದಲ್ಲಿ ಅಳಿದು, ಆ ನೋಟ ಮನದಲ್ಲಿ ಅಳಿದು, ಆ ಮನ ಭಾವದಲ್ಲಿ ಅಳಿದು, ಆ ಭಾವ ಜ್ಞಾನದಲ್ಲಿ ಅಳಿದು, ಆ ಜ್ಞಾನ ಸಮರಸದಲ್ಲಿ ಅಳಿದ ಬಳಿಕ- ಇನ್ನು ಅರಿವ ಕುರುಹಾವುದು ಹೇಳಾ? ನೀನರಸುವ ಕುರುಹು ಎನ್ನ ಕರಸ್ಥಲದ ಲಿಂಗ, ಎನ್ನ ಕರಸ್ಥಲ ಸಹಿತ ನಾನು ನಿನ್ನೊಳಗೆ ನಿರ್ವಯಲಾದೆ. ಎನ್ನ ನಿರ್ವಯಲ ಲಿಂಗ ನಿನಗೆ ಸಾಧ್ಯವಾಯಿತ್ತಾಗಿ; ನೀನೇ ಪರಿಪೂರ್ಣನಯ್ಯಾ. ನಿನ್ನಲ್ಲಿ ಮಹಾಲಿಂಗವು ಸಾಧ್ಯವಾಗಿ ಅದೆ. ಗುಹೇಶ್ವರ ಸಾಕ್ಷಿಯಾಗಿ, ನೀ ಬಯಸುವ ಬಯಕೆ ಸಂದಿತ್ತು ಕಾಣಾ ಸಂಗನಬಸವಣ್ಣಾ.