ವಚನ - 1462     
 
ಯೋಗ ಶಿವಯೋಗಗಳ ಹೊಲಬನರಿಯದೆ ಯೋಗಿಗಳು ಶಿವಯೋಗಿಗಳು ಎಂದರೆ, ಸೀಳ್ನಾಯಿ ಸಿಂಹವಾಗಬಲ್ಲುದೆ? ಯೋಗದ ಅಷ್ಟಾಂಗವನು, ಶಿವಯೋಗದ ಷಟ್ ಸ್ಥಲವನು ಶಿವಲಿಂಗದಲ್ಲಿ ಹುರಿಗೊಳಿಸಿದಲ್ಲದೆ ಯೋಗ ಶಿವಯೋಗಗಳ ಹೊಲಬಿನ ನಿಲುಕಡೆಯು ನಿಲುಕದು. ಅದೆಂತೆಂದೊಡೆ: ಯಮ ನಿಯಮಗಳ ಗುಣಧರ್ಮಗಳನರಿತಾಚರಿಪನೆ ಭಕ್ತ ಆಸನಗಳ ಭೇದವನರಿತಾಚರಿಪನೆ ಮಹೇಶ್ವರ, ಚರಾಚರಾತ್ಮಕವೆನಿಪ್ಪ ಪ್ರಾಣಿಗಳಿಗೆ ಲಯಸ್ಥಾನವಾದ, ಪ್ರಾಣಾಯಾಮದ ಭೇದವನರಿತಾಚರಿಪನೆ ಪ್ರಾಣಲಿಂಗಿ , ಪಂಚೇಂದ್ರಿಯ ವಿಷಯಂಗಳಲ್ಲಿ ಸಂಚರಿಪ ಮನ-ಮಾರುತಂಗಳ ಸಂಯಮದ ನಿಗ್ರಹದ, ಪ್ರತ್ಯಾಹಾರವನರಿತಾಚರಿಪನೆ ಪ್ರಸಾದಿ, ಇಷ್ಟಲಿಂಗಧ್ಯಾನದ ಮೂಲವನರಿತು ಭಾವದ ಹಸ್ತದಲ್ಲಿ ಧರಿಸುವ ಮಹಾಲಿಂಗದ ಧ್ಯಾನ- ಧಾರಣಗಳನರಿತಾಚರಿಪನೆ ಶರಣ ಅಂತಪ್ಪ ಭಾವದ ಹಸ್ತದಲ್ಲಿ ಧ್ಯಾನಧಾರಣಗಳಿಂದ ತಂದ ಮಹಾಲಿಂಗದಲ್ಲಿ ಕೂಡಿ ಸಮರಸವಾಗುವ ಸಮಾಧಿಯನರಿತಾಚರಿಪನೆ ಐಕ್ಯ. ಅದೆಂತೆಂದೊಡೆ: ಯೋಗಜಾಗವೇ “ಯಮೇನ ನಿಯಮೈನೈವಮನ್ಯೇಭಕ್ತ ಇತಿ ಸ್ವಯಂ ಸ್ಥಿರಾಸನಸಮಾಯುಕ್ತೋ ಮಾಹೇಶ್ವರ ಪದಾನ್ವಿತಃ ಚರಾಚರಲಯಸ್ಥಾನಂ ಲಿಂಗಮಾಕಾಶಸಂಜ್ಞ ಕಂ ಪ್ರಾಣೇತದ್ಯೋಮ್ನಿ ತಲ್ಲೀನೇ ಪ್ರಾಣಲಿಂಗಿಭವೇತ್ಸುಮಾನೆ ಪ್ರತ್ಯಾಹಾರೇಣ ಸಂಯುಕ್ತಃ ಪ್ರಸಾದೀತಿ ನ ಸಂಶಯಃ ಧ್ಯಾನಧಾರಣ ಸಂಪನ್ನಃ ಶರಣಸ್ಥಲವಾನೆಸುಧಿಃ ಲಿಂಗೈಕ್ಯೋದ್ವೈತಭಾವತ್ಮಾ ನಿಶ್ಚಲೈಕಸಮಾಧೀನಾ ಏವಮಷ್ಟಾಂಗಯೋಗೇನ ವೀರಶೈವೋಣಭವೇನ್ನರಃ ತಸ್ಮಾತ್ ಸರ್ವಪ್ರಯತ್ನೇನ ಕರ್ಮಣಾಜ್ಞಾನತೋಪವಾ ತ್ವಮಪ್ರಯಷ್ಟಾಂಗ ಮಾರ್ಗೇಣ ಶಿವಯೋಗೀಭವೇತ್ ಎಂಬುದಾಗಿ, ಇಂತಪ್ಪ ಅಷ್ಟಾಂಗಯೋಗದ ಕೀಲವನು ಷಟ್ ಸ್ಥಲ, ಶಿವಯೋಗದಲ್ಲಿ, ನಿಜವೀರಶೈವನಾಗುವ ನಿಲುವಳಿನರಿಯನರಿದು, ನಮ್ಮ ಗುಹೇಶ್ವರಲಿಂಗದಲ್ಲಿ ನಿಬ್ಬೆರಗುಗೊಂಡವರಿಬ್ಬರು ಶಿವಸಿದ್ಧರಾಮ, ನಿಜಗುಣಶಿವಯೋಗಿಗಳು ಕೇಳಾ ಗೋರಕ್ಷಯ್ಯ.