ವಚನ - 1483     
 
ಲಿಂಗವಿಚಾರ ಆಚಾರದೊಳಡಗಿ, ಆಚಾರಕ್ರಿಯೆಗಳು ಗುರುವಿನೊಳಡಗಿ, ಗುರುವೆನ್ನಂಗದೊಳಡಗಿ, ಅಂಗ ಲಿಂಗ ನೈಷ್ಠೆಯೊಳಡಗಿ, ಲಿಂಗನೈಷ್ಠೆಯ ಆಚರಣೆಯಾಚಾರವಾವರಿಸಿ, ಆಚಾರದ ನಿಲವ ಗುರುಮೂರ್ತಿಯಾವರಿಸಿ, ಗುರುಮೂರ್ತಿ ಸರ್ವಾಂಗವನಾವರಿಸಿ, ಸರ್ವಾಂಗವ ಲಿಂಗನೈಷ್ಠೆಯಾವರಿಸಿ, ಲಿಂಗನೈಷ್ಠೆಯ ಸಾವಧಾನವಾವರಿಸಿ, ಸಾವಧಾನ ಸುವಿಚಾರವ ಮಹಾಜ್ಞಾನವಾವರಿಸಿ, ಮಹಾಜ್ಞಾನದೊಳಗೆ ಪರಮಾನಂದ ನಿಜನಿಂದು, ನಿಜದೊಳಗೆ ಪರಮಾಮೃತ ತುಂಬಿ, ಮೊದಲ ಕಟ್ಟೆ ಒಡೆದು, ನಡುವಣ ಕಟ್ಟೆಯನಾಂತು ನಿಂದು, ನಡುವಣ ಕಟ್ಟೆಯು ಎರಡು ಕಟ್ಟೆಯು ಕೂಡಿ ಬಂದು ಕಟ್ಟೆಯನಾಂತುದು. ಈ ಮೂರು ಕಟ್ಟೆಯನೊಡೆದ ಮಹಾಜಲವೆ ಪರಮಪದವಾದುದು. ಆ ಪದದಲ್ಲಾನೆರಗಿ ಪಾದೋದಕ ಕೊಂಡೆನ್ನ ನಾನರಿಯದೆ ಹೋದೆ ಕಾಣಾ ಗುಹೇಶ್ವರಾ.