ವಚನ - 1487     
 
ಲಿಂಗ ಸೂತ್ರಾತ್ಮನೋರಪಿ, ವಿಷ್ವತಶ್ಚಕ್ಷು, ಊರ್ಧ್ವರೇತಂ ವಿರೂಪಾಕ್ಷಃ, ಪುರುಷಂ ಕೃಷ್ಣಪಿಂಗಳಂ ಋತಂ ಸತ್ಯಂ ಪರಬ್ರಹ್ಮಂ, ಲಿಂಗಂಮನಂ ತಮವ್ಯಕ್ತಮಚಿಂತ್ಯಂ, ಲಿಂಗಂ ಶಿವ ಪರಾತ್ಪರಮಧಿಷ್ಠಾನಾಂ ಸಮಸ್ತಸ್ಯಂ” ಎಂಬ ಶ್ರುತಿಯುಂಟಾಗಿ; ಜಗವೆಲ್ಲಾ ನೇತ್ರಂಗಳಾಗಿರ್ಪಾತನು ಶಿವನೆನಲಾ ಶ್ರುತಿ ಜಗವೆಲ್ಲಾ ನೇತ್ರಂಗಳಾಗಿದ್ದರೆ, ನೇತ್ರಂಗಳೊಳಗೆ ಉತ್ತಮ ಮಧ್ಯಮ ಕನಿಷ್ಠಂಗಳೇಕಾದವೆಂದಡೆ, ನೇತ್ರಕ್ಕೆ ನೇತ್ರವಾದ ಜಗನೇತ್ರಕ್ಕೆ ಪ್ರಕಾಶವಾಗಿ ತನ್ನ ತಾ ತೋರದಿದ್ದಂತೆ, ಜ್ಯೋತಿರ್ಲಿಂಗವನೆ ನೋಡಿದ ನೇತ್ರವು ಲಿಂಗನೇತ್ರವು. ಅದೀಗ ಉತ್ತಮವು. ಖಗಮೃಗ ಕ್ರಿಮಿಕೀಟ ಪತಂಗ ನೇತ್ರಂಗಳು ಉಭಯ ಕರ್ಮಂಗಳಿಲ್ಲವಾಗಿ ದೃಷ್ಟಿದೋಷವಿಲ್ಲ. ಅದು ಮಧ್ಯವೆನಿಸಿತ್ತು. ಅಪವಿತ್ರಜೀವಿಗಳಾದ ಭವಿಗಳ ನೇತ್ರವು ಉಭಯ ಕರ್ಮಕ್ಕನುಕೂಲವಾದ ಕಾರಣ, ಚರ್ಮಚಕ್ಷುವೆಂದು ತನ್ನ ತಾನರಿಯದ ಗಾಡಾಂಧಕಾರವೆಂದು, ಮೀನನೇತ್ರವೆಂದು ವಿಷನೇತ್ರ ವಿಷಯನೇತ್ರವೆಂದು ಮನ್ಮಥನ ಕೈಗೆ ಸಿಲ್ಕಿದ ನೀಲೋತ್ಪಲಬಾಣವೆಂದು, ತಾಮಸಾಗ್ನಿಯೆಂದು, ನೇತ್ರೇಂದ್ರಿಯವೆಂದು, ಶಿವಲಾಂಛನಧಾರಿಗಳ ಕೆಡಿಸುವ ಮಹಾಪಾತಕದೃಷ್ಟಿಯೆಂದು, ವಿಷಯ ಗಾಳಿಯೆಂದು ಪೇಳಲ್ಪಟ್ಟಿತ್ತು. ಅವರಿಂಗಿಷ್ಟಲಿಂಗಧಾರಣವಿಲ್ಲದ ಕಾರಣ, ಕನಿಷ್ಠವೆಂದು ಪೇಳಲ್ಪಟ್ಟಿತ್ತು. ಇದು ಕಾರಣ, ಶಿವಭಕ್ತರವರ ನೋಡುವುದಿಲ್ಲ. ಅವರು ಸುಕರ್ಮ ದುಷ್ಕರ್ಮವೆಂಬ ಮಾಯಾ ರೂಪುಗಳಂ ಎದುರಿಟ್ಟು ನೋಡುತ್ತಿಹರಾಗಿ, ಶಿವಾರ್ಚನೆ ಶಿವಾರ್ಪಣವಂ ಮಾಡುವುದಿಲ್ಲ. ಅವರ ಬಹುಜನ್ಮಾಂತರದ ಮಹಾಪಾತಕಂಗಳು ತಮ್ಮ ಸೋಂಕವೆಂದು, ಮೇರುಗಿರಿಯಂ ಪಿಡಿದು ಘೋರಾಸ್ತ್ರ ಪ್ರಯೋಗದಿಂ ದಹಿಸಿ ಗುಹೇಶ್ವರಲಿಂಗವನೊಡಗೂಡುವರು ನೋಡಾ.