ವಚನ - 735     
 
ಅಂದೊಮ್ಮೆ ಧರೆಯ ಮೇಲೆ ಉದಕವಿಲ್ಲದಂದು ಕೆಳಯಿಂಕೆ ಪಾದವ ನೀಡಿದೆಯಲ್ಲಾ ಬಸವಣ್ಣ. ಧರೆಯ ತಾಗಿದ ಪಾದವ ಧಿಗಿಲನೆ ಎತ್ತಲು ಭುಗಿಲೆನೆ ಉದಕವೆದ್ದು ನಿಮ್ಮ ಉರಸ್ಥಲಕೆ ಬಾರದೆ ಬಸವಣ್ಣಾ! ಕನಲಿದಂಕೆಗೆ ನಿಂದು ನೋಡಲು ಸಪ್ತ ಸಾಗರಂಗಳೆಲ್ಲವು ನಿಮ್ಮ ಕಿರುಪಾದದಲ್ಲಿ ಅಡಗವೆ ಬಸವಣ್ಣಾ? ಅದನೆಂತು ಕೊಡಬಹುದು, ಅದನೆಂತು ಕೊಳಬಹುದು? ನಮ್ಮ ಗುಹೇಶ್ವರಲಿಂಗಕ್ಕೆ ನಿಮ್ಮ ಪಾದೋದಕವೆ ಮಜ್ಜನ ಕಾಣಾ ಸಂಗನಬಸವಣ್ಣ.