Index   ವಚನ - 788    Search  
 
ಅಯ್ಯಾ! ನವರತ್ನ ಪ್ರಕಾಶಕ್ಕೆ ಸಮಾನವಾದ ಶಿಲಾರೂಪ ಪಾಷಾಣಂಗಳ ಮಧ್ಯದಲ್ಲಿ ಕ್ರಿಯಾಗ್ನಿ ಇರ್ದು ದಹನಕೃತ್ಯಂಗಳಿಗೆ ಒಳಗಾಗದಿರ್ಪಂತೆ; ಕುಂತಣದೇಶ ಮೊದಲಾದ ಸಮಸ್ತ ದೇಶಂಗಳಲ್ಲಿ ಸೂರ್ಯನ ಪ್ರಕಾಶ ಮರೀಚಿಕಾಜಲ; ಅಶ್ವ-ಗಜ-ಎರಳೆಗಳೋಪಾದಿಯಲ್ಲಿ ಕಣ್ಣಿಗೆ ಕಾಣಿಸಿ ಕೈವಶವಾಗದಂತೆ; ಒಬ್ಬಾನೊಬ್ಬ ಚಿತ್ರಕನ ಮನದ ಮಧ್ಯದಲ್ಲಿ ಅನಂತ ಚಿತ್ರವಿಚಿತ್ರ ಪ್ರಕಾಶಂಗಳಡಗಿರ್ಪಂತೆ; ಕಂಠ, ಲೆಕ್ಕಣಿಕೆ, ಬಳಹಂಗಳ ಮೊನೆಯಲ್ಲಿ ಸಮಸ್ತ ವರ್ಣಂಗಳಡಗಿರ್ಪಂತೆ; ಕನ್ನಡಿಯೊಳಗೆ ಅನಂತ ಬಿಂಬಂಗಳಡಗಿರ್ಪಂತೆ; ಪಟ್ಟ ಪಟ್ಟಾವಳಿಗಳು ಮೊದಲಾದ ಸಮಸ್ತವಸನಂಗಳ ಮಧ್ಯದಲ್ಲಿ ಸಮಸ್ತ ಬಣ್ಣಂಗಳಡಗಿರ್ಪಂತೆ; ಮೂಕನಂತರಂಗದಲ್ಲಿ ನಾಮ-ರೂಪ-ಕ್ರಿಯೆಗಳಡಗಿರ್ಪಂತೆ; ಕವಿತ್ವವುಳ್ಳ ಶಾಸ್ತ್ರಜ್ಞನಂತರಂಗದಲ್ಲಿ ಅರ್ಥ-ಅನ್ವಯ-ಆಕಾಂಕ್ಷೆಗಳಡಗಿರ್ಪಂತೆ; ಸಚ್ಚಿದಾನಂದ ಸ್ವರೂಪ ಸದ್ಭಕ್ತ ಶಿವಶರಣಗಣಂಗಳಲ್ಲಿ ಗೋಪ್ಯವಾಗಿರ್ದು ಹಠಯೋಗಿ ಮೊದಲಾದ ಭಿನ್ನಕರ್ಮಕಾಂಡಿಗಳಿಗೆ ಅಗೋಚರವಾಗಿರ್ಪುದು ನೋಡ! ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣಾ.