Index   ವಚನ - 794    Search  
 
ಅಯ್ಯಾ! ನಿರಾಳ ನಿಃಶೂನ್ಯ ಪರಮ ಭಕ್ತ-ಜಂಗಮ ತಾನಾಗಲರಿಯದೆ ಬರಿದೆ ಅಹಂಕರಿಸಿ ಮುಂದುಗೊಂಡು ಮೂರು ಮಲಗಳ ಸ್ವೀಕರಿಸಿ, ನಾವೆ ಭಕ್ತ-ಜಂಗಮವೆಂದು ನುಡಿವ ಕರ್ಮಕಾಂಡಿಗಳು ಕಾಶಿ, ಕೇತಾರ, ಶ್ರೀಶೈಲ, ಗಯಾ, ಪ್ರಯಾಗ, ಶಿವಗಂಗೆ, ಕಂಚಿ, ಕಾಳಹಸ್ತಿ, ಪಂಪಾಕ್ಷೇತ್ರ, ವೀರಣ್ಣ, ಬಸವಣ್ಣ, ಕಲ್ಲಣ್ಣ, ಮಲ್ಲಣ್ಣ, ಕಂಥೆ, ಕಮಂಡಲ, ಗದ್ದಿಗೆ, ಪಾವುಗೆ, ಭಸ್ಮ, ಘಂಟಿಕೆ, ಪುರಾಣ, ದಂಡಾಗ್ರ, ಗಿಳಿಲು, ಶಂಖು, ತಿಥಿ, ವಾರ, ನಕ್ಷತ್ರ, ಹುಣ್ಣಿವೆ, ಅಮಾವಾಸ್ಯೆ, ಸೂರ್ಯ, ಚಂದ್ರಾಗ್ನಿ, ದೀಪಾರತಿ ಗಂಗೆ, ಗೌರಿ, ವಿಘ್ನೇಶ್ವರ ಮೊದಲಾದವು-ಇವು ದೈವಂಗಳೆಂದು ಕಲ್ಲು, ಮಣ್ಣು, ಮರದಿಂದ ರಚಿಸಿ, ಸಂದಿ-ಗೊಂದಿ-ಮಾಡು- ಜಗುಲಿಯ ಮೇಲಿಟ್ಟು, ಅದರ ತೊಳೆದ ನೀರು, ಎಂಜಲವ ತಿಂಬವರ ದೇವಭಕ್ತರೆನಬಹುದೆ? ಇಂತಪ್ಪ ಅನಾಚಾರಿ ಶ್ವಪಚರ, ಭಕ್ತ-ಜಂಗಮ-ದೇವರೆಂದು ಪೂಜಿಸಲಾಗದು. ನಿರಾಭಾರಿ ವೀರಶೈವಾಚಾರ ಕ್ರಿಯಾಜ್ಞಾನ ವೈರಾಗ್ಯ ಸದ್ಭಕ್ತಿಯುಳ್ಳ ಸದ್ಭಕ್ತ ಶಿವಶರಣನ ಪೂಜಿಸಿ ಪಾದೋದಕ-ಪ್ರಸಾದವ ಕೊಂಡಡೆ, ಭವಪಾಶಕರ್ಮಂಗಳು ಮಾಣ್ಬವು ಕಾಣಾ ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣ.