Index   ವಚನ - 795    Search  
 
ಅಯ್ಯಾ! ನೀಲಮಣಿ ಮಧ್ಯಸ್ಥಾನದಲ್ಲಿ, ಕಾರ ಮೇಘದೊಳಗಿನ ಮಿಂಚಿನ ಪ್ರಕಾಶವಾಗಿ ಚಿದಾಕಾಶಸ್ವರೂಪದಿಂದ ಪೀತವರ್ಣ ಮೊದಲಾಗಿ ಅನಂತ ವರ್ಣಸ್ವರೂಪವಾಗಿ ಅತ್ಯಂತವಾದ ಅಣುರೂಪವಾಗಿ ಬದವಣೆಯ ಮುಳ್ಳಿನ ಹಾಗೆ ಅನಂತ ಪ್ರಕಾರದಿಂದ ಕಾಣಲ್ಪಡುವುದು ನಿಜಶಿವಯೋಗಿಗೆ, ಲಿಂಗಧ್ಯಾನಿಗಳಿಗೆ ಅನಾದಿಮೂಲ ಪ್ರಣಮಸ್ವರೂಪದಿಂದ ಮುಖಕಮಲದ ಮೇಲೆ ಕಾಣಲ್ಪಡುವುದು ನೋಡಾ. ಅದೆಂತೆಂದಡೆ: ಮುಖ ಮಧ್ಯದಲ್ಲಿ ನೇತ್ರ, ನೇತ್ರ ಮಧ್ಯದಲ್ಲಿ ಮನಸ್ಸು, ಮನೋಮಧ್ಯದಲ್ಲಿ ತಾನೆ ತಾನಲ್ಲದೆ ಮತ್ತೊಂದು ಸಾಧಕವಿಲ್ಲದದು ನಿಜತಾರಕಬ್ರಹ್ಮಶಾಂಭವಮೂರ್ತಿಯ ನೋಡ- ಇಂತು ನಿಜತಾರಕಬ್ರಹ್ಮಶಾಂಭವಮೂರ್ತಿಯ ಮೂರ್ತಿಗೊಂಡಿರ್ಪರು ನೋಡಾ ಗುಹೇಶ್ವರಲಿಂಗದ ಹೃತ್ಕಮಲ ಮಧ್ಯದಲ್ಲಿ ಸಿದ್ಧರಾಮಯ್ಯ.