ವಚನ - 801     
 
ಅಯ್ಯಾ! ಲಿಂಗಾಂಗ ಸಮರಸ ಹೇಗುಂಟೆಂದರೆ: ಸುಚಿತ್ತಕಮಲ ಮೊದಲಾಗಿ ಆಯಾಯ ಕರಸ್ಥಲದಲ್ಲಿ ಮೂರ್ತಗೊಂಡಿರುವ ಸುಜ್ಞಾನಜಂಗಮ ಸ್ವರೂಪನಾದ ಇಷ್ಟ ಮಹಾಲಿಂಗದ ಗರ್ಭದಲ್ಲಿ ತನ್ನಂಗವ ಬಿಟ್ಟು; ಎರಡು ನೇತ್ರ ಒಂದಾದ ಲಲಾಟನೇತ್ರದಲ್ಲಿ ಇಷ್ಟಲಿಂಗವನು ಮುಳುಗಿಸುವುದೀಗ ಲಿಂಗಾಂಗಸಂಗಸಮರಸವು ನೋಡಾ. ಆ ಇಷ್ಟ ಮಹಾಲಿಂಗ ನೇತ್ರದರ್ಪಣದಲ್ಲಿ ಪ್ರತಿಬಿಂಬವಾಗಿ ಮನೋನೇತ್ರಕ್ಕೆ ಒಂದೆರಡಾಗಿ ಕಾಣಲ್ಪಡುವುದೀಗ ಪ್ರಾಣಲಿಂಗವು. ಆ ಪ್ರಾಣಲಿಂಗಹಸ್ತಂಗಳೆಂಬ ಎರಡರಲ್ಲಿ ನೇತ್ರದ್ವಯವೆಂಬ ಕುಚಂಗಳೆರಡ ಹಿಡಿವುದೀಗ ಲಿಂಗಾಂಗಸಂಗಸಮರಸವು [ನೋಡಾ]. ರೂಪು ರೇಖೆವಿಭ್ರಮ ವಿಲಾಸ ಕಳಾಲಾವಣ್ಯಸ್ವರೂಪವಾದ ಪರಶಿವ ಬ್ರಹ್ಮಮೂರ್ತಿಯ ಮುದ್ದು ಮುಖದ ಆಧಾರದಲ್ಲಿ ಓಂಕಾರನಾದಾಮೃತವ ತಾ ಚುಂಬನ ಮಾಡಲ್ಕೆ ಚಿತ್ಶಕ್ತಿಸ್ವರೂಪಮಪ್ಪ ತನ್ನ ಮುದ್ದು ಮುಖದ ಆಧಾರದಲ್ಲಿ ಹುಟ್ಟಿದ ನಕಾರಾದಿ ಪಂಚಪ್ರಣಮಂಗಳು, ಆ ಪಂಚಬ್ರಹ್ಮ ಚುಂಬನವ ಮಾಡಲ್ಕೆ ಇದು ಲಿಂಗಾಂಗ ಸಮರಸವು. ಇದು ಶರಣಸತಿ ಲಿಂಗಪತಿ ನ್ಯಾಯವು. ಇದು ತ್ರಿತನುವ ಲಿಂಗಕ್ಕರ್ಪಿಸುವ ಕ್ರಮವು. ತನ್ನಲ್ಲಿ ತನ್ನ ತೋರಿ ನನ್ನಲ್ಲಿ ನನ್ನ ತೋರಿದನಾಗಿ ನಾನು ನೀನೆಂಬುದಿಲ್ಲ ನೀನು ನಾನೆಂಬುದಿಲ್ಲ, ತಾನೆ ತಾನಾದುದು. ಬಯಲು ಬಯಲು ಕೂಡಿದ ಹಾಗೆ, ಮಾತು ಮಾತ ಕಲಿವ ಹಾಗೆ ಪರಶಿವಲಿಂಗದಲ್ಲಿ ನಿಜದೃಷ್ಟಿ ಕರಿಗೊಂಡ ಮೇಲೆ ಗುಹ್ಯಕ್ಕೆ ಗುಹ್ಯ ಗೋಪ್ಯಕ್ಕೆ ಗೋಪ್ಯ ರಹಸ್ಯಕ್ಕೆ ರಹಸ್ಯ. ಇದ ಗುಹೇಶ್ವರನೆ ಬಲ್ಲನಲ್ಲದೆ, ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಾ?