Index   ವಚನ - 804    Search  
 
ಅಯ್ಯಾ! ಸಗುಣಿಯಲ್ಲ ನಿರ್ಗುಣಿಯಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಪರಮನಲ್ಲ ಜೀವನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಅಹುದೆನ್ನ ಅಲ್ಲವೆನ್ನ ನೋಡಾ! ನಿರವಯಶೂನ್ಯಲಿಂಗಮೂರ್ತಿ. ನಾನು ಎನ್ನ ನೀನು ಎನ್ನ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಸೂಕ್ಷ್ಮನಲ್ಲ ಸ್ಥೂಲನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಯೋಗದವನಲ್ಲ ಭೋಗದವನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಮಾಡುವೆ [ನೆನ್ನ] ಮಾಡಿಸಿಕೊಂಬೆನೆನ್ನ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಸುಶಬ್ದದವನಲ್ಲ ಕುಶಬ್ದದವನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ ಸುಸ್ಪರ್ಶನದವನಲ್ಲ ಕುಸ್ಪರ್ಶನದವನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಸುರೂಪದವನಲ್ಲ ಕುರೂಪದವನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಸುರುಚಿಯವನಲ್ಲ ಕುರುಚಿಯವನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಸುಗಂಧದವನಲ್ಲ ದುರ್ಗಂಧದವನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಇಂತು ಉಭಯವಳಿದು ಸಂಗನಬಸವಣ್ಣನ ಕರ-ಮನ-ಭಾವಂಗಳಲ್ಲಿ ಬೆಳಗುವ ಪರಂಜ್ಯೋತಿ ತಾನೆ ನೋಡಾ! ಗುಹೇಶ್ವರಲಿಂಗವು ಚೆನ್ನಬಸವಣ್ಣ.