ವಚನ - 807     
 
ಅಯ್ಯಾ! ಸದ್ಭಕ್ತ-ಮಹೇಶ್ವರ-ಪ್ರಸಾದಿ- ಪ್ರಾಣಲಿಂಗಿ-ಶರಣ-ಐಕ್ಯ-ನಿರಾಲಂಬಸ್ಥಲ ಮೊದಲಾದ ಸಮಸ್ತಸ್ಥಲಂಗಳನರಿದು ಮರೆದು, ಮೇಲಾದ ನಿರವಯಶೂನ್ಯಸ್ಥಲದಲ್ಲಿ ಪ್ರಭಾವಿಸುವ ಮೂರ್ತಿಯ ಇರವೆಂತೆಂದಡೆ- ಅಜ್ಞಾನಮಾಯಾಸಂಸಾರ ಪ್ರಪಂಚೆಂಬ ಪಾಶದಲ್ಲಿ ಬಿದ್ದು ತೊಳಲುವ ಜಡಜೀವರಿಗೆ ಮರೆಯಾಗಿ, ಕಣ್ಣುಮನ ಭಾವಂಗಳಿಗೆ ಗೋಚರವಿಲ್ಲದೆ ಕ್ರಿಯಾಕಾಶ-ಜ್ಞಾನಾಕಾಶ-ಭಾವಾಕಾಶ-ಪಿಂಡಾಕಾಶ-ಬಿಂದ್ವಾಕಾಶ- ಚಿದಾಕಾಶ-ಮಹದಾಕಾಶಮಧ್ಯದಲ್ಲಿ ಸಿಡಿಲುಮಿಂಚು ಅಭ್ರಚ್ಛಾಯೆಯಂತೆ, ಇಕ್ಷು-ಲವಣ-ಸರ್ಪಿ-ದಧಿ-ಕ್ಷೀರ-ಘೃತ-ಸ್ವಾದೋದಕ ಮೊದಲಾದ [ಸಪ್ತ] ಸಮುದ್ರಂಗಳಲ್ಲಿ ಉದರಾಗ್ನಿ-ಮುಂದಾಗ್ನಿ-ಕಾಮಾಗ್ನಿಶೋಕಾಗ್ನಿ- ವಡವಾಗ್ನಿ-ಕಾಲಾಗ್ನಿ-ಚಿದಗ್ನಿ[ಯೆಂಬ ಸಪ್ತಾಗ್ನಿ] ಇರ್ದು, ಆ ಸಮುದ್ರಂಗಳ ಸಂಸಾರ-ಪಾಶ-ಜನ್ಮ-ಜರೆ-ಮರಣಾದಿಗಳಿಗೆ ಹೊರಗಾಗಿ ಇರ್ಪಂತೆ, ಶಿವಶರಣರ್ಗೆ ರೂಪಾಗಿ ಜಡಜೀವರಿಗೆ ನಿರೂಪವಾಗಿರ್ಪುದು ನೋಡ! ಗುಹೇಶ್ವರಲಿಂಗವು ಚೆನ್ನಬಸವಣ್ಣ.