ವಚನ - 922     
 
ಇಂದು ನಾಳೆ ಮುಕ್ತಿಯ ಪಡೆವೆನೆಂಬ ಶಿಷ್ಯಂಗೆ ಮುಂದಳ ಮುಕ್ತಿಯ ತೋರಿಹೆನೆಂಬ ಗುರುಗಳ ನೋಡಿರೆ! ಹೋಮ, ನೇಮ, ಜಪ, ತಪಗಳ ಮಾಡಿ ತಾನುಂಡು ಫಲವುಂಟೆಂದ ಗುರು ಹುಸಿದು ಸತ್ತ, ಶಿಷ್ಯ ಹಸಿದು ಸತ್ತ. ಹಿಂದಣ ಕಥೆಯ ಹೇಳುವಾತ ಹೆಡ್ಡ, ಮುಂದಣ ಕಥೆಯ ಹೇಳುವಾತ ಮೂಢ, ಇಂದಿನ ಘನವ ಹೇಳುವಾತನೆ ಹಿರಿಯನಯ್ಯಾ. ತಾ ಹುಟ್ಟಿದಂದೆ ಯುಗಜುಗಂಗಳು ಹುಟ್ಟಿದವು, ತಾನಳಿದಲ್ಲೆ ಯುಗಜುಗಂಗಳಳಿದವು. ತನ್ನ ನೇತ್ರಕ್ಕಿಂಪಾದುದೆ ಸುವರ್ಣಸುವಸ್ತು, ತನ್ನ ಶ್ರೋತಕ್ಕೆ ಸೊಂಪಾದುದೆ ವೇದಶಾಸ್ತ್ರ, ಪುರಾಣ. ತನ್ನ ಘ್ರಾಣಕ್ಕಿಂಪಾದುದೆ ಪರಿಮಳ, ತನ್ನ ಜಿಹ್ವೆಗಿಂಪಾದುದೆ ರುಚಿ, ತನ್ನ ಮನ ಮುಳುಗಿದುದೆ ಲಿಂಗ. ತನ್ನ ನೆತ್ತಿಯಲ್ಲಿ ಸತ್ಯರ್ಲೋಕ, ಪಾದದಲ್ಲಿ ಪಾತಾಳಲೋಕ, ನಡುವೆ ಹನ್ನೆರಡು ಲೋಕ. ಅಂಡಜ ಪಿಂಡಜ ಉದ್ಭಿಜ ಜರಾಯುಜವೆಂಬ ಎಂಬತ್ತು ನಾಲ್ಕುಲಕ್ಷ ಜೀವರಾಶಿಗಳು. ತನ್ನಲ್ಲಿ ಕಾಯವು, ತನ್ನಲ್ಲಿ ಜೀವವು, ತನ್ನಲ್ಲಿ ಪುಣ್ಯವು, ತನ್ನಲ್ಲಿ ಪಾಪವು, ತನ್ನಲ್ಲಿ ಶಬ್ದವು, ತನ್ನಲ್ಲಿ ನಿಶ್ಯಬ್ಧವು. ಒಂದು ಒಡಲೆಂಬ ಊರಲ್ಲಿ ಒಂಬತ್ತು ಶಿವಾಲಯವು. ಆ ಶಿವಾಲಯದ ಶಿಖರದ ಮೇಲೆ ಶಿವಲಿಂಗದೇವರು. ಪೂರ್ವಭಾಗದಲ್ಲಿ ಚಂದ್ರಾದಿತ್ಯರು, ಪಶ್ಚಿಮ ಭಾಗದಲ್ಲಿ ಪರಶಿವನು, ಉತ್ತರ ಭಾಗದಲ್ಲಿ ಮಹೇಶ್ವರನು, ದಕ್ಷಿಣ ಭಾಗದಲ್ಲಿ ರುದ್ರನು, ಇಂತೀ ಪಂಚೈವರ ಮನದ ಕೊನೆಯ ಕೀಲಿನ ಸಂಚವನರಿದು, ತುರ್ಯಾವಸ್ಥೆಯಲ್ಲಿ ನಿಲಿಸಿ ಒಡಲುವಿಡಿದು ಕಾಂಬುದೆ ಉಪಮೆ. ಈ ಘಟದೇವತೆಯ ಸಟೆಯೆಂದು ಬಿಸುಟು ಮುಂದೆ ತಾ ದಿಟವಪ್ಪುದಿನ್ನೆಲ್ಲಿಯದೊ? ಪೃಥ್ವಿಯಳಿದಂದೆ ಭೋಗಾದಿ ಭೋಗಂಗಳಳಿದವು. ಅಪ್ಪುವಳಿದಂದೆ ಮಾಯಾಮೋಹಾದಿಗಳಳಿದವು. ತೇಜವಳಿದಂದೆ ಹಸಿವು ತೃಷೆಗಳಳಿದವು. ವಾಯುವಳಿದಂದೆ ನಡೆನುಡಿ ಚೈತನ್ಯಂಗಳಳಿದವು. ಆಕಾಶವಳಿದಂದೆ ಅವು ಅಲ್ಲಿಯೆ ಲೀಯವಾಯಿತ್ತು. ಇದು ಕಾರಣ ಉರಿಕೊಂಡ ಕರ್ಪುರದ ಕರಿ ಕಂಡವರುಂಟೆ? ಅಪ್ಪುವುಂಡ ಉಪ್ಪಿನ ಹರಳ ಮರಳಿ ಹೊರೆಯ ಕಟ್ಟಿ ಹೊತ್ತವರುಂಟೆ? ವಾಯುಕೊಂಡ ಜ್ಯೋತಿಯ ಬೆಳಗ ಕಂಡವರುಂಟೆ? ಹರಿ ಬ್ರಹ್ಮಾದಿಗಳ್ಗೆಯು ಕಾಣಬಾರದಾಗಿ. ಮಣ್ಣಿನ ಸಾರಾಯದಿಂದ ಮರನುತ್ಪತ್ಯ. ಮರದ ಸಾರಾಯದಿಂದ ಎಲೆಯುತ್ಪತ್ಯ. ಎಲೆಯ ಸಾರಾಯದಿಂದ ಹೂವ ಉತ್ಪತ್ಯ. ಹೂವ ಸಾರಾಯದಿಂದ ಕಾಯಿ ಉತ್ಪತ್ಯ. ಕಾಯ ಸಾರಾಯದಿಂದ ಹಣ್ಣು ಉತ್ಪತ್ಯ. ಹಣ್ಣಿನ ಸಾರಾಯದಿಂದ ರುಚಿ ಉತ್ಪತ್ಯ. ರುಚಿಯಿಂದತ್ತ ಇಲ್ಲವೆಂಬ ತತ್ತ್ವ. ಮಣ್ಣು ಮರನು ಅಳಿ ಬಳಿಕ ಬೇರೆ ರುಚಿಯಿಪ್ಪ ಠಾವುಂಟೆ? ದೇಹವಳಿದ ಬಳಿಕ ಪ್ರಾಣವಿಪ್ಪುದಕ್ಕೆ ಠಾವುಂಟೆ? ಇಲ್ಲವಾಗಿ; ಇದು ಕಾರಣ, ಗುಹೇಶ್ವರನೆಂಬ ಲಿಂಗವ ಒಡಲು ವಿಡಿದು ಕಂಡೆ ಕಾಣಾ, ಸಿದ್ಧರಾಮಯ್ಯ.