ವಚನ - 921     
 
ಇಂತೀ ಮರ್ತ್ಯಲೋಕದ ಮಹಾಗಣಂಗಳು ಅನಂತ ಪರೀಕ್ಷಣೆಯಿಂದ ಲಕ್ಷಣಾಲಕ್ಷಣಂಗಳಿಂದ ವಿಚಾರಿಸಿ, ಮಾರ್ಗಕ್ರಿಯೆವಿಡಿದು ಭಕ್ತಗಣ ಮಧ್ಯದಲ್ಲಿ ಸಾಕಾರಕಂಥೆಯ ನಡೆನುಡಿಗಳ, ಪರಶಿವ ಗುರುಲಿಂಗಜಂಗಮಕ್ಕೆ ಸಮರ್ಪಿಸಿ ನಿರ್ಮಾಲ್ಯವಾದ ಪುಷ್ಪವ ಮಾರ್ಗಕ್ರಿಯಾಸ್ವರೂಪ ಸಮಾಧಿಯಲ್ಲಿ ಬಿಟ್ಟು ನಿರವಯವಾದರು ನೋಡ! ಇಂತು ಮಾರ್ಗಾಚರಣೆಯನರಿದು ಅದರಲ್ಲಿ ಸಂತೃಪ್ತರಾಗಿ ಅದರಿಂದ ಮೀರಿತೋರುವ ಮೀರಿದ ಕ್ರಿಯಾಚರಣೆಯನರಿದು ಇದ್ಧು ಇಲ್ಲದಂತೆ, ಹೊದ್ದಿ ಹೊದ್ದದಂತೆ ನಿರಾಕಾರಕಂಥೆಯ ಪರಿಮಳ ನಡೆನುಡಿಗಳ ನಿರಾಕಾರ ಪರಶಿವ ಗುರುಲಿಂಗಜಂಗಮಕ್ಕೆ ಸಮರ್ಪಿಸಿ ನಿರ್ಮಾಲ್ಯವಾದ ಪುಷ್ಪವ ಮೀರಿದ ಕ್ರಿಯಾಸ್ವರೂಪ ಸಮಾಧಿಯಲ್ಲಿ ಬಿಟ್ಟು ನಿರವಯ ನಿರಂಜನರಾದರು ನೋಡ! ಇಂತು ಮಾರ್ಗಕ್ರಿ[ಯೆ]ಯ ಮೀರಿದ ಕ್ರಿ[ಯೆ]ಯ ನಡೆ-ನುಡಿ-ಪರಿಣಾಮ-ತೃಪ್ತಿಯಲ್ಲಿ ತಾವೆ ತಾವಾಗಿರ್ಪರು ನೋಡ! ಗುಹೇಶ್ವರಲಿಂಗ ಪ್ರಭುವೆಂಬ ನಾಮರೂಪುಕ್ರಿಯವಳಿದು ಸಂಗನಬಸವಣ್ಣನ ಬೆಳಗಿನೊಳಗೆ ಮಹಾಬಯಲಾದರು ನೋಡ!