Index   ವಚನ - 938    Search  
 
ಅಷ್ಟತನುವಿನ ಘಟ್ಟಿಯ ಕರಗಿಸಿ, ಕಟ್ಟುಗ್ರದ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳೆಂಬವ ಸುಟ್ಟುರುಹಿ, ತನುವಿನ ಅವಗುಣವ ಕೆಡಿಸಿ, ಮನದ ಸಂಚಲವ ನಿಲಿಸಿ ಸಕಲ ಕರಣಂಗಳ ಅರಿವಿಂಗೆ ಆಹುತಿಯನಿಕ್ಕಿ ಸುಜ್ಞಾನಪ್ರಭೆಯನುಟ್ಟು ಸುಜ್ಞಾನಪ್ರಭೆಯ ಹೊದೆದು, ಸುಜ್ಞಾನಪ್ರಭೆಯ ಸುತ್ತಿ ಸುಜ್ಞಾನಪ್ರಭೆಯ ಹಾಸಿ, ಮಹಾಜ್ಞಾನದಲ್ಲಿ ನಿರ್ಭಾವ ಸಂಪನ್ನನಾದ ಮಡಿವಾಳನ ಮಡಿಯ ಪ್ರಸಾದವ ನಾನು ಹೊದ್ದ ಕಾರಣ ನಿರ್ಮಳನಾದೆನು, ನಿಜೈಕ್ಯನಾದೆನು, ನಿಶ್ಚಿಂತನಾದೆನು. ಇದು ಕಾರಣ, ಗುಹೇಶ್ವರಲಿಂಗದಲ್ಲಿ ತೆರಹಿಲ್ಲದಿಪ್ಪ ಮಡಿವಾಳನ ಪ್ರಸಾದದಿಂದ ನಿಮ್ಮ ಘನವನರಿದು ಬದುಕಿದೆನು ಕಾಣಾ ಸಂಗನಬಸವಣ್ಣಾ.