ವಚನ - 942     
 
ಇಷ್ಟಲಿಂಗ ಪ್ರಾಣಲಿಂಗವೆಂಬ ಭೇದವನಾರು ಬಲ್ಲರು ಹೇಳಾ? ಅಂತರಂಗವೆಂಬ ಶಬ್ದಕ್ಕೆ ಬಹಿರಂಗ ಮುಂದುಗೊಂಡಿಪ್ಪುದು. ಬಹಿರಂಗವೆಂಬ ಶಬ್ದಕ್ಕೆ ಅಂತರಂಗ ಮುಂದುಗೊಂಡಿಪ್ಪುದು. ಮನವನೆಡೆಗೊಂಡ ಲಿಂಗದ ಅರಿವು, ವಿಚಾರ ವ್ಯಾಕುಲಕ್ಕೊಳಗಾಗಬಾರದೆಂದು ಮನ ಭಾವ ಜ್ಞಾನ ನೋಟಕ್ಕೆ ತಂದು, ಕರಸ್ಥಲದಲ್ಲಿ ನಿಕ್ಷೇಪಿಸಿ ಅಂತರಂಗ ಬಹಿರಂಗವೆಂದರಿಯದೆ, ಅನಿಮಿಷನಾಗಿಪ್ಪನು ಶರಣನು. ಪ್ರಾಣಲಿಂಗದ ಪ್ರಸನ್ನಮುಖವ ನೋಡಿ ಪರಿಣಾಮಿಸಲೋಸುಗ ತೇಜವೆಂಬ ದರ್ಪಣವ ಹಿಡಿದಿಪ್ಪ ನೋಡಯ್ಯಾ. ಗುಹೇಶ್ವರಲಿಂಗದಲ್ಲಿ ನಿಜವನೆಯ್ದಿಹೆನೆಂದಡೆ, ಕುರುಹುವಿಡಿದು ಕುರುಹುಗೆಡಬೇಕು ನೋಡಾ ಸಿದ್ಧರಾಮಯ್ಯಾ.