Index   ವಚನ - 1    Search  
 
ಅಂತಪ್ಪ ಸದ್ಭಕ್ತನು, ತನ್ನ ಭಕ್ತಿಸ್ಥಲದ ಆಚರಣೆಯ ಸಾಂಗವಾಗಿ ನಡಸಿ, ಮಹೇಶ್ವರಸ್ಥಲವನಂಗೀಕರಿಸಿ, ಮಹೇಶ್ವರನೆನೆಸಿ, ಆ ಆಚರಣೆಯನೆಂತು ನಡೆಸುವನೆಂದರೆ, ಕ್ರಿಯಾತನುವ ತಾಳಿ, ಪ್ರಾಣವಾಯುಗಳ ಪ್ರಪಂಚಿನಲ್ಲಿ ತೊಡಕದೆ, ಮನ ಬುದ್ಧಿ ಚಿತ್ತ ಅಹಂಕಾರಂಗಳ ತನ್ನಾಧೀನವಂ ಮಾಡಿ, ಅಷ್ಟಮದಂಗಳ ನಷ್ಟವೆಂದೆನಿಸಿ, ಸಪ್ತವ್ಯಸನಂಗಳ ತೊತ್ತಳದುಳಿದು, ಅರಿಷಡ್ವರ್ಗಂಗಳು ಮೊದಲಾದವರ ಅನ್ಯಕ್ಕಾಶ್ರಯಮಾಗದೆ, ಪಂಚೇಂದ್ರಿಯಂಗಳ ಅನ್ಯಸಂಚಾರವ ಕಳೆದು, ಇಂದ್ರಿಯಂಗಳಿಂ ತೋರಿದ ಜ್ಞಾನವಿಷಯ ಸುಖಂಗಳೆಲ್ಲಮಂ ಆ ಲಿಂಗಪ್ರಸಾದವೆಂದೇ ತಾನಂಗೀಕರಿಸಿ, ಶಿವಮತವಲ್ಲದೆ ಮತ್ತೆ ಬೇರೆ ಮತ ಉಂಟೆಂಬ ಭವಬಾಧಕರ ಮುಖಮನಾಲೋಕನಂಗೆಯ್ಯದೆ, ಅವರ ನುಡಿಗಡಣಮಂ ಶ್ರೋತ್ರಮಂ ಸೋಂಕಲೀಯದೆ, ಜಿಹ್ವೆಯ ಕೊನೆಯಲ್ಲಿ ಮರೆದೊಮ್ಮೆಯೂ ಪಾರುಗೊಳ್ಳದೆ, ಅಂತಪ್ಪ ದುಷ್ಕರ್ಮಿಗಳ ಚರಿತ್ರವಾಸನಾ ಧರ್ಮವನಂಗೀಕರಿಸದೆ, ಅವರ ತನುಸೋಂಕಿನಿಂ ಬಂದ ವಾಯು ಸ್ಪರ್ಶನ, ತಮ್ಮಂಗವ ತಟ್ಟಿ ಮುಟ್ಟಲೀಯದೆ, ಜಾಗ್ರಸ್ವಪ್ನದಲ್ಲಿ ಅವರ ನೆನಹು ಮನಕ್ಕೆ ತಟ್ಟದಂತೆ ಬಹಿಷ್ಕಾರವಂ ಮಾಡಿ, ವೀರಶೈವವೆಂಬ ಜಯಸ್ತಂಭಮಂ ಚಿತ್ರದಲ್ಲಿ ಬರೆದು, ಲಿಂಗಾಂಗಸಂಗಿಯಾಗಿ ಜಿಹ್ವೆಯ ಕೊನೆಯಲ್ಲಿ ಮಂತ್ರೋಚ್ಚರಣೆಯ ಉಲುಹಡಗದೆ, ದಯೆಶಾಂತನೆಯ ನಿರ್ಮಲಚಿತ್ತನೆನಿಸಿ, ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯಾಗಿ, ಲಿಂಗಾಣತಿಯಿಂದ ಬಂದ ಪದಾರ್ಥವ ಮಹಾಲಿಂಗ ಪ್ರಸಾದವೆಂದು ತನ್ನಿಷ್ಟಲಿಂಗಕ್ಕೆ ಸಮರ್ಪಣೆಯಂ ಮಾಡಿ, ಆ ಲಿಂಗದೊಡನೆ ಸಹಭೋಜನವನುಂಡು, ಪ್ರಾಣಲಿಂಗಕ್ಕೆ ತೃಪ್ತಿಪಡಿಸಿ, ಜ್ಞಾನಜ್ಯೋತಿಯ ಬೆಳಗಿನಲ್ಲಿ ಸಂಚಾರವ ಮಾಡುವಾತನೆ ಮಹೇಶ್ವರನಯ್ಯಾ, ಮಹಾಲಿಂಗ ಶಶಿಮೌಳಿ ಸದಾಶಿವಾ.