Index   ವಚನ - 38    Search  
 
ಕಟ್ಟಿದೆ ಘಟದಟ್ಟೆಯ ಹೊಲಿದು, ಇಕ್ಕಿದೆ ಚತುರ್ವಿಧದ ನಾಲ್ಕು ಗುಂಟವ ಬಲಿದು. ಗುಂಟದ ದ್ವಾರದಲ್ಲಿ, ಉಭಯಸಂಚದ ಬಾರ ತೆಗೆದು, ತೊಡಕು ಬಂಧವನಿಕ್ಕಿ, ಅಡಿಯ ಬಿಡದಂತೆ, ಹಿಂದಣ ಮಡ ಮುಂದಣ ಉಂಗುಷ್ಠಕ್ಕೆ ಒಂದನೊಂದು ಜಾರದಂತೆ ಬಂಧಿಸಿ, ಸಕಲೇಂದ್ರಿಯವೆಂಬ ಉಭಯವ ಸಂಧಿಸಿ ಕುಣಿಕೆಯನಿಕ್ಕಿ, ಕಾಮದ ಒಡಲ ಮಾದಿಗ ಬಂದೆ, ಘಟ ತೋಕುಳು ತೊಗಲು ಹದಬಂದಿತ್ತು. ಹೊತ್ತು ಹೋದಿಹಿತಣ್ಣಾ. ಮೆಟ್ಟಡಿಯ ಕೊಂಡ ರೊಕ್ಕವ ಕೊಡಿ. ಒಪ್ಪಿದರಿರಲಿ, ಒಪ್ಪದಿದ್ದಡೆ ಮೂರು ಮುಖದಪ್ಪಗೆ ಕೊಟ್ಟೆಹೆ. ತಪ್ಪಡಿಯ ಮೆಟ್ಟೆ ಹೋಗುತ್ತಿದ್ದೇನೆ, ಚನ್ನಯ್ಯಪ್ರಿಯ ಧೂಳನ ಧೂಳಿಗೊಳಗಾಗಿ.