Index   ವಚನ - 89    Search  
 
ಲಿಂಗದಿಂದ ಕಂಡೆಹೆನೆಂಬುದು, ಮನದ ಸೂತಕ. ಮನದಿಂದ ಅರಿದೆಹೆನೆಂಬುದು, ಅರಿವಿನ ಸೂತಕ. ಅರಿವಿನಿಂದ ಅರಿದೆಹೆನೆಂಬುದು, ಮಹತ್ತಪ್ಪ ಘನದ ಸೂತಕ. ಕಾಯದಿಂದ ಕರ್ಮವ ಮಾಡಿ, ಲಿಂಗವನರಿದೆಹೆನೆಂಬುದು ಭಾವದ ಭ್ರಮೆ. ಭ್ರಮೆಯಳಿದು, ಅರಿವನರಿದೆಹೆನೆಂಬುದು ಉಭಯದ ಬೀಜ. ಬೀಜ ನಷ್ಟವಾಗಿ, ಅಂಕುರ ಮಳೆದೋರದೆ, ಶಂಕೆಯೆಂಬ ಸಂದೇಹ ನಂದಿದಲ್ಲಿ, ಅದೇ ನಿಸ್ಸಂಗದ ಇರವೆಂದೆ, ಕಾಮಧೂಮ ಧೂಳೇಶ್ವರಾ.